ರೌಡಿ ಅಕ್ರಂ ಸಿಸಿಬಿ ಪೊಲೀಸ್ ಎನ್ ಕೌಂಟರ್ ಗೆ ಬಲಿ

1990ರಲ್ಲಿ ಪಾತಕ ಲೋಕಕ್ಕೆ ಎಂಟ್ರಿ ಹಾಕಿದ್ದ ಶಿವಮೊಗ್ಗ ಭದ್ರಾವತಿಯ ಅಕ್ರಂ ಕಳೆದ ತಿಂಗಳು ಪೊಲೀಸ್ ಮಾಹಿತಿದಾರರೊಬ್ಬರನ್ನು ಮೂಡಲಪಾಳ್ಯದಲ್ಲಿ ಸಾಯಿಸಿದ್ದ.
ಆಗ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರು ಸದ್ಯದಲ್ಲೇ ಅಕ್ರಂ ಎನ್ ಕೌಂಟರ್ ಆಗುವುದು ಖಚಿತ ಎಂದಿದ್ದರು. ಇಂದು ಬೆಳಗ್ಗೆ ಆಂಧ್ರ ರಿಜಿಸ್ಟ್ರೇಶನ್ ಹೊಂದಿರುವ ಬಿಳಿ ಕಾರಿನಲ್ಲಿ ಸಹಚರನೊಂದಿಗೆ ನಂದಿನಿ ಲೇಔಟ್ ನಿಂದ ಪೀಣ್ಯ ಕಡೆಗೆ ತೆರಳುತ್ತಿದ್ದ ಅಕ್ರಂನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವನನ್ನು ಬೆನ್ನತ್ತಿದರು. ಶರಣಾಗುವಂತೆ ಸೂಚಿಸಿದರೂ ಪರಾರಿಯಾಗಲೆತ್ನಿಸಿದ. ಜತೆಗೆ ಪೊಲೀಸರ ಮೇಲೆ ಗುಂಡಿನ ಮಳೆಗೆರೆದ.
ಆ ವೇಳೆ ಪೊಲೀಸರು ಮೂರು ಗುಂಡುಗಳನ್ನು ಅಕ್ರಂನ ಎದೆಗೆ ಗುರಿಯಿಟ್ಟು ಮಟಾಷ್ ಎಂದರು. ಸ್ಥಳದಲ್ಲೇ ಸಾವನ್ನಪ್ಪಿದ್ದ ಪಾತಕಿ ಅಕ್ರಂ ಕೋಡಿಪಾಳ್ಯದಲ್ಲಿ ವಾಸವಾಗಿದ್ದ. ಘಟನೆಯಲ್ಲಿ ಪೊಲೀಸರಿಗೆ ಯಾವುದೇ ಗಾಯಗಳಾಗಿಲ್ಲ. ಸಹಚರ ಪರಾರಿಯಾಗಿದ್ದಾನೆ. ಕಾರಿನಲ್ಲಿ ಲಾಂಗು, ಮಚ್ಚು, ಪಾಸ್ ಬುಕ್ ಪತ್ತೆಯಾಗಿದೆ. 2 ವಾರದಿಂದ ಪೊಲೀಸರು ಅವನ ಹಿಂದೆ ಬಿದ್ದಿದ್ದರು. ಇತ್ತೀಚೆಗೆ ನಂಜುಂಡಪ್ಪ ಎಂಬುವರನ್ನು ಹತ್ಯೆ ಮಾಡಿದ್ದ.
ಹಾಗೆ ನೋಡಿದರೆ ಮೊದಲ ಅಧಿಕೃತ ಎನ್ ಕೌಂಟರ್ ನಡೆದಿದ್ದು 1989ರಲ್ಲಿ. ಕುಖ್ಯಾತ ರೌಡಿ ಎಂಪಿ ಜೈರಾಜ್ ಬಲಗೈ ಬಂಟ ಸ್ಟೇಷನ್ ಶೇಖರ್ ನನ್ನು ಪರಲೋಕಕ್ಕೆ ಕಳಿಸಿದ್ದರು. ಆದರೆ ಅಂದು ಎನ್ ಕೌಂಟರ್ ನಡೆಸಿದ ಇಂದಿನ ಎಸಿಪಿ ಬಿ.ಬಿ. ಅಶೋಕ್ ಕುಮಾರ್ ವಿರುದ್ಧವೇ ಜೈರಾಜ್ ಹತ್ಯೆ ಆರೋಪ ಹೊರಸಿದ್ದ. ಪ್ರಕರಣದ ಬಗ್ಗೆ ಸಿಬಿಐ ತನಿಖೆಯೂ ನಡೆದಿತ್ತು. ಪಾತಕಿಗಳನ್ನು ಮಟ್ಟ ಹಾಕಲು ಮನಸ್ಸು ಮಾಡಿದಾಗಲೆಲ್ಲ ಪೊಲೀಸರು ಎನ್ ಕೌಂಟರ್ ಅಸ್ತ್ರಗಳನ್ನು ಝಳಪಿಸಿದ್ದಾರೆ.












Click it and Unblock the Notifications