ಒಸಾಮಾ ಹತ್ಯೆ ನೇರಪ್ರಸಾರದಲ್ಲಿ ವೀಕ್ಷಿಸಿದ ಒಬಾಮಾ!

ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕದ Navy SEAL ತಂಡ ಸೋಮವಾರ ಬೆಳಗಿನ ಜಾವ ಅಬೋತಾಬಾದಿನಲ್ಲಿ (ಮೇ 2) ಹತ್ಯೆ ಮಾಡಿತ್ತು.
'ನಾವಂತೂ ಉದ್ವೇಗ, ಆತಂಕದಲ್ಲಿದ್ದೆವು. ಕಾರ್ಯಾಚರಣೆ ಪ್ರಗತಿ ಕಾಣುತ್ತಿದ್ದಂತೆ ಉಸಿರುಬಿಗಿಹಿಡಿದು ನೋಡತೊಡಗಿದೆವು. ಅತ್ತ ಹೆಲಿಕಾಪ್ಟರ್ ಗಳು ಒಸಾಮಾನ ಮನೆ ಮೇಲೆ ಮುರುಕೊಂಡುಬಿದ್ದಿದ್ದರೆ ಇತ್ತ ಪಿನ್ ಡ್ರಾಪ್ ಸೈಲೆನ್ಸ್ ಮನೆ ಮಾಡಿತ್ತು' ಎಂದು ವೀಡಿಯೊ ವೀಕ್ಷಿಸಿದ ಜಾನ್ ಬ್ರೆನ್ ಮಾನ್ ಪ್ರತಿಕ್ರಿಯಿಸಿದ್ದಾರೆ. ಇವರು ಅಮೆರಿಕದ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಸಲಹೆಗಾರ.
ಒಬಾಮಾ ಅಂತೂ ತಮ್ಮ ಮಿಲಿಟರಿ ತಂಡದ ಭದ್ರತೆಯ ಬಗ್ಗೆ ಆತಂಕಗೊಂಡಿದ್ದರು. ಒಸಾಮಾ ಸತ್ತ ಮಾಹಿತಿ ಖಚಿತಪಡುತ್ತಿದ್ದಂತೆ ನಿಟ್ಟುಸಿರು ಬಿಟ್ಟ ಒಬಾಮಾ 'ವಿ ಗಾಟ್ ಹಿಮ್' ಎಂದು ಉದ್ಘರಿಸಿದರು. ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಸಂತಸದಿಂದ ಬೀಗುತ್ತಿದ್ದ ಒಬಾಮಾ, ಅಮೆರಿಕ ನೌಕಾಪಡೆಯ ಅಡ್ಮಿರಲ್ ಮೈಕ್ ಮುಲ್ಲೆನ್ ಅವರಿಗೆ ಹಸ್ತಲಾಘವ ಮಾಡುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು.
ಆದರೆ ಬ್ರೆನ್ ಮನ್ ಅವರು ಗೌಪ್ಯತೆಯ ದೃಷ್ಟಿಯಿಂದ ವೀಡಿಯೊ ನೇರ ಪ್ರಸಾರದ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಬಹುಶಃ ಯೋಧರು ಧರಿಸಿದ್ದ ಹೆಲ್ಮೆಟ್ ಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿರಬಹುದು ಎನ್ನಲಾಗಿದೆ.












Click it and Unblock the Notifications