26/11 ಖದೀಮರನ್ನೂ ಹಿಡಿಯಲು ಚಿದಂಬರಂ ಕರೆ

ಉಗ್ರ ಕುಳ ಲಾಡೆನ್ ನ ಹತ್ಯೆ ಬಗ್ಗೆ ಅಮೆರಿಕ ಅಧಿಕೃತವಾಗಿ ಭಾರತಕ್ಕೆ ಮಾಹಿತಿ ನೀಡಿದ ಬಳಿಕ ಚಿದಂಬರಂ ಹೀಗೆ ಪ್ರತಿಕ್ರಿಯಿಸಿದ್ದಾರೆ. ನಾನಾ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರು ಪಾಕಿಸ್ತಾನವನ್ನು ಆಶ್ರಯ ತಾಣವಾಗಿಸಿಕೊಂಡಿರುವುದರ ಬಗ್ಗೆ ಭಾರತ ಹೇಳುತ್ತಲೇ ಬರುತ್ತಿದೆ. ಇದೀಗ ಲಾಡೆನ್ ಇಸ್ಲಾಮಾಬಾದಿನಲ್ಲಿಯೇ ಹತ್ಯೆಗೀಡಾಗುವ ಮೂಲಕ ಭಾರತ ನಿಲುವಿಗೆ ಪುಷ್ಟಿ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
'ಮುಂಬೈ ದಾಳಿಕೋರರು ಅಂದರೆ ಸಂಚು ರೂಪಿಸಿದವರು ಮತ್ತು ದಾಳಿ ನಡೆಸಿದವರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ. ಪಾಕಿಸ್ತಾನದ ಒಳಾಡಳಿತ ಸಚಿವರಿಗೆ ದಾಳಿಗೆ ಸಂಬಂಧಪಟ್ಟಂತೆ ಭಾರತದ ವತಿಯಿಂದ ಕೆಲವು ಉಗ್ರರ ಹೆಸರುಗಳನ್ನು ನೀಡಲಾಗಿದೆ. ಅವರನ್ನು ಬಂಧಿಸುವಂತೆ ಪಾಕ್ ಸರಕಾರಕ್ಕೆ ಈ ಸಂದರ್ಭದಲ್ಲಿ ಮತ್ತೊಮ್ಮೆ ಆಗ್ರಹಿಸುತ್ತೇವೆ' ಎಂದು ಚಿದು ಹೇಳಿಕೆಯಲ್ಲಿ ಹೇಳಿದ್ದಾರೆ.
ವಿಶ್ವದ ಮೂಲೆ ಮೂಲೆಗಳಿಂದ ಲಾಡೆನ್ ಸಾವಿನ ಬಗ್ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಲಾಡೆನ್ ಸಾವಿನ ಸಮ್ಮುಖದಲ್ಲಿ ಪಾಕ್ ಸರಕಾರ ಅಧಿಕೃತವಾಗಿ ಪ್ರತಿಕ್ರಿಯೆ ನಿಡಿಲ್ಲ. ಇನ್ನು ಅಲ್ಲಿನ ಮಾಧ್ಯಮಗಳು ಮುಖ ತಿರುಗಿಸಿಕೊಂಡು ಕುಳಿತಿವೆ. ಪಾಕಿಸ್ತಾನದಲ್ಲಿ ಯಾರೂ ತುಟಿ ಬಿಚ್ಚುತ್ತಿಲ್ಲ. ಈ ಮಧ್ಯೆ, ಅಲ್ ಖೈದಾ ಭಯೋತ್ಪಾದಕ ಸಂಘಟನೆ ಲಾಡೆನ್ ಸಾವನ್ನು ಖಚಿತಪಡಿಸಿದೆ. ಜನಪ್ರಿಯ ಪತ್ರಿಕೆ 'ಡಾನ್' ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದು, ತಾಂತ್ರಿಕ ದೋಷ ನೆಪವೊಡ್ಡಿ ತನ್ನ ವೆಬ್ ಸೈಟ್ ಅನ್ನು ಸ್ತಬ್ದಗೊಳಿಸಿದೆ. ಇತರೆ ವೆಬ್ ಸೈಟ್ ಗಳೂ ಲಾಡೆನ್ ಬಗ್ಗೆ ಉಸಿರೆತ್ತಿಲ್ಲ.
ವ್ಯಾಟಿಕನ್ ಪ್ರತಿಕ್ರಿಯೆ : ಅಷ್ಟೊಂದು ಅಮಾಯಕರನ್ನು ಹತ್ಯೆ ಮಾಡಿದ್ದಕ್ಕೆ ಮತ್ತು ದ್ವೇಷವನ್ನು ಬಿತ್ತಲು ಧರ್ಮವನ್ನು ಬಳಸಿಕೊಂಡಿದ್ದಕ್ಕೆ ಅವನು (ಲಾಡೆನ್) ದೇವರಿಗೆ ಉತ್ತರ ನೀಡಲೇಬೇಕು. ಕ್ರಿಸ್ತರು ಸಾವಿನ ಬಗ್ಗೆ ಆನಂದಪಡುವುದಿಲ್ಲ. ಆದರೆ ಲಾಡೆನ್ ಸಾವಿಗೆ ಜನ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ದೇವರು ಮತ್ತು ಮನುಷ್ಯರೆಡೆಗೆ ಜನರ ಜವಾಬ್ದಾರಿಗಳೇನು ಎಂಬುದನ್ನು ಪುನರ್ ಮನನ ಮಾಡಿಕೊಡುತ್ತದೆ ಎಂದು ವ್ಯಾಟಿಕನ್ ವಕ್ತಾರ ಫಾದರ್ ಫೆಡೆರಿಕೊ ಲೊಂಬಾರ್ಡೆ ಹೇಳಿದ್ದಾರೆ.












Click it and Unblock the Notifications