ಅಂದು ಐಟಿನಲ್ಲಿ ಇಂದು ಭ್ರಷ್ಟಾಚಾರದಲ್ಲಿ ನಂ.1

ಒಂದು ದಿನದ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ಹುಬ್ಬಳ್ಳಿ, ಬಿಜಾಪುರ ಮತ್ತು ಉಡುಪಿಯಲ್ಲಿ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಂತರ, ಸಂಜೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಯುವ ಕಾರ್ಯಕರ್ತರೊಂದಿಗೆ ಹಿಂದಿಯಲ್ಲಿ ಸಂವಾದ ನಡೆಸಿದರು. ಈ ಸಂವಾದದಲ್ಲಿ ಎರಡು ದಿನಗಳ ಹಿಂದೆ ಯುವ ಕಾಂಗ್ರೆಸ್ ಸೇರಿದ ಕನ್ನಡ ನಟಿ ರಮ್ಯಾ ಕೂಡ ಭಾಗವಹಿಸಿದ್ದರು.
ಭ್ರಷ್ಟಾಚಾರದಲ್ಲಿ ಅಗ್ರಸ್ಥಾನ ಪಡೆದಿರುವುದರಿಂದ ಅನುಭವಿಸುತ್ತಿರುವವರು ಸಾಮಾನ್ಯ ಜನರು. ಇದರ ವಿರುದ್ಧ ಯುವ ಕಾಂಗ್ರೆಸ್ಸಿಗರೇ ಹೋರಾಟ ಮಾಡಬೇಕು. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತುಹಾಕಬೇಕು ಎಂದು ರಾಹುಲ್ ಆಗ್ರಹಿಸಿದರು. ಬ್ಲಾಕ್ ಮಟ್ಟದಿಂದ ವಿಧಾನಸೌಧದವರೆಗೆ ಸೂಕ್ತ ವ್ಯಕ್ತಿಯನ್ನು ಆರಿಸುವ ಜವಾಬ್ದಾರಿ ಕಾರ್ಯಕರ್ತರದ್ದು ಎಂದು ಅವರು ನುಡಿದರು.
ಯುವ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ನಂತರ ಹನ್ನೆರಡು ವರ್ಷಗಳ ನಂತರ ಇತ್ತೀಚೆಗೆ ರಚಿಸಲಾಗಿರುವ ಕೆಪಿಸಿಸಿ ಪದಾಧಿಕಾರಿಗಳ ಸಮಿತಿಗೆ ಆಯ್ಕೆಯಾಗಿರುವವರೊಂದಿಗೆ ಕೂಡ ಮಾತುಕತೆ ನಡೆಸಲಿದ್ದಾರೆ. ಸಮಿತಿ ರಚನೆಯಿಂದ ಅಸಮಾಧಾನಗೊಂಡಿರುವ ಕೆಲ ಹಿರಿಯ ನಾಯಕರೊಂದಿಗೂ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಇಂದು ಆಗಮಿಸಿದ ರಾಹುಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರಮಾಡಿಕೊಂಡರು.
ನಟಿ ರಮ್ಯಾ ಪೇಚಾಟ : ಯುವ ಕಾಂಗ್ರೆಸ್ ಸೇರಲು ಯುವ ನಾಯಕ ರಾಹುಲ್ ಗಾಂಧಿ ಅವರೇ ಸ್ಫೂರ್ತಿ ಎಂದು ಹೇಳಿದ್ದ ಕನ್ನಡ ನಟಿ ರಮ್ಯಾ [ಗ್ಯಾಲರಿ] ಅವರು ಸಂವಾದದ ನಂತರ ಸಭೆಯಿಂದ ಹೊರಬರಲು ಹರಸಾಹಸ ಪಡಬೇಕಾಯಿತು. ಅರಮನೆ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಹಂಸಬಿಳುಪಿನ ಸೆಲ್ವಾರ್ ಕಮೀಜ್ ಧರಿಸಿದ್ದ ರಮ್ಯಾ ನೋಡಲು ದುಂಬಾಲುಬಿದ್ದರು.
ರಾಹುಲ್ ಗಿಂದ ರಮ್ಯಾರನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಮುಗಿಬಿದ್ದರಿಂದ ಸಾಕಷ್ಟು ನೂಕುನುಗ್ಗಲು ಉಂಟಾಯಿತು. ಪೊಲೀಸರು ಜನಜಂಗುಳಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ರಮ್ಯಾರನ್ನು ಸುತ್ತುವರಿದಿದ್ದ ಭದ್ರತಾ ಸಿಬ್ಬಂದಿಗಳು ಕೊನೆಗೂ ಅವರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾದರು.












Click it and Unblock the Notifications