ಶ್ರೀಲಂಕಾ ಗೆಲುವಿಗಾಗಿ ತಿರುಪತಿ ತಿಮ್ಮಪ್ಪನಿಗೆ ಮೊರೆ!
ತಿರುಪತಿ, ಏಪ್ರಿಲ್ 2: ಅಪ್ಪಾ, ತಿಮ್ಮಪ್ಪ! ನಿನ್ನ ಮಹಿಮೆ ಬಲ್ಲೆ! ನನ್ನ ಶ್ರೀಲಂಕಾ ತಂಡವನ್ನು ವಿಶ್ವ ಕಪ್ ನಲ್ಲಿ ಗೆಲ್ಲಿಸಪ್ಪಾ' ಎಂದು ಪ್ರಾರ್ಥಿಸಿ, ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಸಾಕ್ಷಾತ್ ತಿಮ್ಮಪ್ಪನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಅಂದಹಾಗೆ ರಾಜಪಕ್ಸೆ ತಿಮ್ಮಪ್ಪನ ಪರಮಭಕ್ತರು. ಆಗಾಗ್ಗೆ ತಿರುಪತಿಗೆ ಭೇಟಿ ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಹೌದು ತಿಮ್ಮಪ್ಪನಿಗೆ ಪ್ರಶಸ್ತವಾದ ಶನಿವಾರದಂದು (ಏಪ್ರಿಲ್ 2) ಬೆಳಗ್ಗೆಯೇ ತಿರುಪತಿಗೆ ಆಗಮಿಸಿ, ತಮ್ಮ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ ಎಂದು ತಿರುಪತಿ ತಿರುಮಲ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ. ಬೆಟ್ಟದಿಂದ 15 ಕಿ.ಮೀ. ದೂರದಲ್ಲಿರುವ ರಾಣಿಗುಂಟಾ ವಿಮಾನ ನಿಲ್ದಾಣಕ್ಕೆ ಶ್ರೀಲಂಕಾದ ವಿಶೇಷ ವಿಮಾನದಲ್ಲಿ ಬಂದು ಅಲ್ಲಿಂದ ರಸ್ತೆ ಪ್ರಯಾಣದ ಮೂಲಕ ತಿಮ್ಮಪ್ಪನ ಆಶೀರ್ವಾದಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಇದರಿಂದ ತಿರುಪತಿ ತಿಮ್ಮಪ್ಪನೂ ಪೀಕಲಾಟಕ್ಕೆ ಸಿಕ್ಕಿಕೊಂಡಿದ್ದಾನೆ. ಜತೆಗೆ ತಿಮ್ಮಪ್ಪನಿಗೆ ನಿಜವಾದ ಸವಾಲೂ ಎದುರಾಗಿದೆ. 'ನಿಮ್ಮ ಕಡೆಯಿಂದ (ರಾಷ್ಷ್ರಪತಿ ಪ್ರತಿಭಾ ಪಾಟೀಲ್?) ಯಾರೂ ಬಂದು ನನ್ನನ್ನು ಬೇಡಿಕೊಂಡಿಲ್ಲ. ಆದ್ದರಿಂದ ಶ್ರೀಲಂಕಾಗೇ ನನ್ನ ಆಶೀರ್ವಾದ ಎನ್ನುತ್ತಾನೋ, ಅಥವಾ ದೇಶಪ್ರೇಮದ ಮುಂದೆ ಉಳಿದವರೆಲ್ಲ ಹುಲುಮಾನವರು' ಎಂದು ಭಾರತಕ್ಕೇ ಜೈ ಎನ್ನುತ್ತಾನೋ ಉತ್ತರಕ್ಕಾಗಿ ಇಂದು ರಾತ್ರಿ 10 ರವರೆಗೂ ಕಾದು ನೋಡುವ!












Click it and Unblock the Notifications