ಕಾರ್ಮೋಡ: ಮಳೆ ಬಂದರೆ ಲೆಕ್ಕಾಚಾರ ಹೇಗೆ ?
ಮೊಹಾಲಿ, ಮಾ. 30: ಶ್ರೀಲಂಕಾ ಫೈನಲ್ ಗೆ ಬಂದಾಗಿದೆ. ಇದರಿಂದ ಭಾರತ ತಂಡದ ಮೇಲೆ ಒಂದಷ್ಟು ಒತ್ತಡ ಹೆಚ್ಚಾಗಿದೆ. ನಮ್ಮದೇ ನೆಲದಲ್ಲಿ ನೆರೆಯ ಎರಡು ರಾಷ್ಟ್ರಗಳು ಕಾದಾಡಿ, ಕಪ್ ಎತ್ತಿಕೊಂಡು ಹೋಗುವುದನ್ನು ಭಾರತದ ನೂರ್ಕೋಟಿ ಪ್ರಜೆಗಳು ಸುತರಾಂ ಇಷ್ಟಪಡಲಾರರು. ಆದ್ದರಿಂದ ಪಾಕಿಸ್ತಾನದ ವಿರುದ್ಧ ಇಂದು ಗೆಲ್ಲಲೇಬೇಕೆಂಬ ಹಕ್ಕೊತ್ತಾಯವನ್ನು ದೇಶದ ಕ್ರಿಕೆಟ್ ಅಭಿಮಾನಿಗಳು ಮಂಡಿಸಿದ್ದಾರೆ. ಆದರೆ ಮಳೆ ಬಂದರೆ ಗತಿಯೇನು!? ಎಂಬ ಸಣ್ಣ ದುಗುಡ ಮನೆಮಾಡಿದೆ. ಮಳೆ ಬಂದರೆ ಪಂದ್ಯದ ದಿಕ್ಕುದೆಸೆ ಹೀಗೆ ಸಾಗುತ್ತೆ:
ಮೊಹಾಲಿಯಲ್ಲಿ ಮಳೆರಾಯ ಮಂಗಳವಾರ ರಾತ್ರಿ ಭರ್ಜರಿ ಬ್ಯಾಟಿಂಗ್ ಆಡಿದ್ದಾನೆ. ಇನ್ನೂ ಮಳೆರಾಯಾದರೆ ಆ ಶಿವನೇ ಕಾಪಾಡಬೇಕು ಭಾರತ ತಂಡವನ್ನು. ಬುಧವಾರ ಮಧ್ಯಾಹ್ನದವರೆಗೂ ಮಳೆಯಾಗದೆ, ಪಂದ್ಯ ಸಕಾಲಕ್ಕೆ ಆರಂಭವಾದರೆ ಎಲ್ಲವೂ ವೆಲ್ ಅಂಡ್ ಗುಡ್. ಮ್ಯಾಚ್ ಆರಂಭವಾದ ಮೇಲೆ ಕುತೂಹಲ ತಾಳಲಾರದೆ ಮಳೆರಾಯನೂ ಮ್ಯಾಚ್ ನೋಡಲು ಬಂದರೆ... ಉಭಯ ತಂಡಗಳಿಂದ ತಲಾ 20 ಓವರ್ ಆಡಿಸಿ ಮಳೆರಾಯನನ್ನೂ ಸಂತೃಪ್ತಿ ಪಡಿಸಬೇಕಾದೀತು. ಆಗ ಡಕ್ ವರ್ತ್ ನಿಯಮದನ್ವಯ ಫಲಿತಾಂಶ.
ಮಳೆರಾಯ ತೀರಾ ಸಿಟ್ಟಿಗೆದ್ದು ರುದ್ರನರ್ತನ ಶುರುವಿಟ್ಟುಕೊಂಡಾಗ ಮತ್ತೊಂದು ಸಾಧ್ಯತೆ ಇರುತ್ತದೆ. ಇಡೀ ಪಂದ್ಯನ್ನು ಗುರುವಾರಕ್ಕೆ ಮುಂದೂಡಬಹುದು. ಗುರುವಾರವೂ ಮಳೆರಾಯನ ವಕ್ರದೃಷ್ಟಿಯಿಂದಾಗಿ ಪಂದ್ಯ ನಡೆಯಲಿದ್ದಲ್ಲಿ... ಗುಂಪಿನ ಹಂತದಲ್ಲಿ ತೋರಿರುವ ಪ್ರದರ್ಶನವೇ ಮಾನದಂಡವಾಗಲಿದೆ. ಆಗ ಭಾರತದ ಮಾನ ದಂಡವಾಗಲಿದೆ. ಏಕೆಂದರೆ ಭಾರತಕ್ಕಿಂತ ಪಾಕ್ ಮೇಲುಗೈ ಸಾಧಿಸಿದೆ. ಇನ್ನೂ ಒಂದು ಸಾಧ್ಯತೆ... ಒಂದೆ ವೇಳೆ ಟೈ ಆದರೆ. ಏಕೆಂದರೆ ಈ ಹಿಂದೆ ಇಂತಹ ಪರಿಸ್ಥಿತಿಯೂ ಒಮ್ಮೆ ಎದುರಾಗಿತ್ತು. ಆಗ ಸೂಪರ್ ಓವರ್... ಈಗ, ಓವರ್ ಟು ಮೊಹಾಲಿ ಸ್ಟೇಡಿಯಂ!












Click it and Unblock the Notifications