ಸರ್ಕಾರವೇ ಗಣಿಗಳನ್ನು ನಡೆಸಲಿ: ಜನಾರೆಡ್ಡಿ ಸವಾಲ್

ಬಳ್ಳಾರಿ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ನಾವು ಯಾವುದೇ ಅವ್ಯವಹಾರ ನಡೆಸಿಲ್ಲ. ಅಕ್ರಮ ಗಣಿಗಾರಿಕೆಯ ಆರೋಪವನ್ನು ವಿಪಕ್ಷ ನಮ್ಮ ಮೇಲೆ ಹೊರೆಸುತ್ತಿದೆ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವೆ ಗಣಿಗಾರಿಕೆ ನಡೆಸಲಿ, ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಲೈಸನ್ ನೀಡುವುದು ಬೇಡ ಎಂದರು. ಎಲ್ಲಾ ಗಣಿಗಳನ್ನು ಸರ್ಕಾರವೇ ಸ್ವಾಧೀನ ಪಡಿಸಿಕೊಳ್ಳಲಿ, ಉಕ್ಕು ಸ್ಥಾವರ ನಿರ್ಮಾಣಕ್ಕೆ ಸರ್ಕಾರವೇ ಅದಿರು ಒದಗಿಸಲಿ, ಇದರಿಂದ ಬರುವ ಲಕ್ಷಾಂತರ ರು.ಗಳ ಆದಾಯವನ್ನು ಜನ ಕಲ್ಯಾಣ ಯೋಜನೆಗೆ, ರಾಜ್ಯದ ಅಭಿವೃದ್ಧಿಗೆ ಬಳಸಲಿ ಎಂದು ಜನಾರ್ದನ ರೆಡ್ಡಿ ಹೇಳಿದರು.
ನಾವು ಮಾಡಿದ ತಪ್ಪೇನು? : ಮುಖ್ಯಮಂತ್ರಿ ಅವರು ಅದಿರು ನಿಷೇಧ ಹೇರಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹೇರಿದಾಗ ಅದನ್ನು ಸ್ವಾಗತಿಸಿದ್ದು ರೆಡ್ಡಿ ಸೋದರರು ಎಂಬುದು ವಿಪಕ್ಷಗಳಿಗೆ, ರಾಜ್ಯದ ಹಿರಿಯ ನಾಯಕರಿಗೆ ಮರೆತು ಹೋಗಿದೆ. 600 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆ ಕೈಗೊಂಡಿದ್ದೇವೆ. ಬೈಪಾಸ್ ರಸ್ತೆ, ರಿಂಗ್ ರಸ್ತೆ, ವಸತಿ ಯೋಜನೆ ಜಾರಿಯಲ್ಲಿದೆ ಇದೆಲ್ಲವನ್ನು ವಿಪಕ್ಷ ನಾಯಕರು ಬಂದು ನೋಡಲಿ. ನಮ್ಮ ಕಾಲೆಳೆಯುವ ಕುಹಕಿಗಳ ಬಗ್ಗೆ ವರಿಷ್ಠರ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು ಎಂದಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದಿದ್ದು ಹೇಗೆ? : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಳ್ಳಾರಿ ಜಿಲ್ಲೆಯ ಕೊಡುಗೆ ಎಷ್ಟಿದೆ ಎಂಬುದನ್ನು ಬಿಜೆಪಿ ಹಿರಿಯ ನಾಯಕರು ಮರೆಯಬಾರದು. ಸರ್ಕಾರ ರಚನೆಗೆ ರೆಡ್ಡಿ ಸೋದರರು ಪಟ್ಟ ಶ್ರಮದ ಅರಿವಿದ್ದರೆ ಸಾಕು. ಒಬ್ಬರನ್ನೊಬ್ಬರು ಕಾಲೆಳೆಯುವ ರಾಜಕೀಯ ಬೇಸರ ತರಿಸಿದೆ. ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾವು ಮಾಡಿದ ಕೆಲಸದಲ್ಲಿ ಲೋಪವಿದ್ದರೆ ತೋರಿಸಿ ತಿದ್ದುಕೊಳ್ಳುತ್ತೇವೆ. ವಿನಾಕಾರಣ ಆರೋಪ ಹೊರೆಸಿದರೆ ಸಹಿಸಿಕೊಳ್ಳಲಾಗದು ಎಂದು ಜನಾರ್ದನರೆಡ್ಡಿ ಹೇಳಿದ್ದಾರೆ.












Click it and Unblock the Notifications