ಕಾಲೇಜು ಅಂದ್ರೆ ಬುಕ್ಕು, ಜೀನ್ಸು ಅಷ್ಟೇ ಅಲ್ಲ!

College students at beggars center
ಬಳ್ಳಾರಿ ಮಾ. 26 : ಕಾಲೇಜೆಂದರೆ ತರಗತಿಗಳಲ್ಲಿ ಪಾಠ ಕೇಳಿ, ಅವಕಾಶ ಸಿಕ್ಕಾಗಲೆಲ್ಲ ಮಜಾ ಉಡಾಯಿಸಿ, ಪರೀಕ್ಷೆ ಬಂದಾಗ ಕಣ್ಣಿಗೆ ಎಣ್ಣೆ ಹಾಕಿಕೊಂಡು ಹಗಲು ರಾತ್ರಿ ಓದಿದ್ದನ್ನೆಲ್ಲ ಉತ್ತರ ಪತ್ರಿಕೆಯಲ್ಲಿ ಕಕ್ಕಿ ಬರುವುದಷ್ಟೇ ಅಲ್ಲ ಎನ್ನುವುದನ್ನು ಬಳ್ಳಾರಿಯ ಕಾಲೇಜಿನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಕಾಲೇಜು ಹುಡುಗರು ಅಂದುಕೊಂಡ ಜೀವನದ ಹೊರತಾದ ಜೀವನವನ್ನು ಕಾಣುವುದು ಸಾಧ್ಯ ಎಂಬುದನ್ನು ಈ ವಿದ್ಯಾರ್ಥಿಗಳು ಸಾಕ್ಷಾತ್ ಕಂಡಿದ್ದಾರೆ.

ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಈ ಹೊಸ ಯತ್ನಕ್ಕೆ ನಾಂದಿ ಹಾಡಿದವರು. ವಿದ್ಯಾರ್ಥಿ ಜೀವನವನ್ನು ರೂಪಿಸುವಲ್ಲಿ ಮಾತ್ರವಲ್ಲ ಸಮಾಜದ ಓರೆಕೋರೆಗಳನ್ನು ಕಣ್ಣಾರೆ ಕಂಡು ಅವಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿಯೂ ಇಂಥ ಅನುಭವಗಳು ಸಹಕಾರಿಯಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕಾಲೇಜಿನ ಸಮಾಜಶಾಸ್ತ್ರ ವಿಭಾಗದಲ್ಲಿ 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ದೇಶದ ಏಳ್ಗೆಯನ್ನು ತೀವ್ರವಾಗಿ ಕಾಡುತ್ತಿರುವ ಭಿಕ್ಷಾಟನೆ, ಅಭಿವೃದ್ಧಿಯನ್ನು ಸಾಕಷ್ಟು ಪೀಡಿಸುತ್ತಿರುವ ನಿರುದ್ಯೋಗ, ಅನಾರೋಗ್ಯ, ಅನಕ್ಷರತೆ, ಮೌಢ್ಯತೆಗಳು ವಿದ್ಯಾರ್ಥಿಗಳ ಮನಸ್ಸು ತಟ್ಟಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಾಕಷ್ಟು ವಿಷಯ ಸಂಗ್ರಹಣೆ ಮಾಡಿದ್ದಾರೆ.

ನಿರಾಶ್ರಿತರ ಕೇಂದ್ರ(ಭಿಕ್ಷಾಟನಾ ನಿರ್ಮೂಲನಾ ಕೇಂದ್ರ)ಕ್ಕೆ ಸೇರಿದವರನ್ನು ಕಂಡಾಗ ವಿದ್ಯಾರ್ಥಿಗಳಿಗೆ ಆಶ್ಚರ್ಯ ಕಾದಿತ್ತು. ಸರ್ಕಾರ ಇವರಿಗೆ ನೀಡುತ್ತಿರುವ ಸೌಲಭ್ಯ, ಕಲ್ಪಿಸುತ್ತಿರುವ ಪುನರ್ವಸತಿ ಯೋಜನೆಗಳು, ದೈನಂದಿನ ಆಹಾರ, ಖರ್ಚು, ಸೌಲಭ್ಯಗಳು, ಸ್ವಯಂ ಉದ್ಯೋಗ ತರಬೇತಿ, ಸಾಲ ಸೌಲಭ್ಯ, ಆರೋಗ್ಯ ತಪಾಸಣೆ, ನೈರ್ಮಲ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೇ, ಭಿಕ್ಷಾಟನೆಗೆ ಕಾರಣವಾಗಿರುವ ಮುಖ್ಯ ಕಾರಣಗಳನ್ನು ಪಟ್ಟಿ ಮಾಡಿಕೊಂಡರು. ವಾರ್ಡನ್ ಈರಣ್ಣ, ವಿದ್ಯಾರ್ಥಿಗಳ ಬಹುತೇಕ ಪ್ರಶ್ನೆಗಳಿಗೆ ಸರ್ಕಾರದ ಮುಖವಾಣಿಯಾಗಿಯೇ ಉತ್ತರಗಳನ್ನು ನೀಡಿದನು.

ಬೆಳಗಲ್ಲು ರಸ್ತೆಯಲ್ಲಿ ಇರುವ ಶ್ರೀಮತಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅವರು, ವೃದ್ಧಾಪ್ಯದ ಒಂಟಿತನ, ಮಕ್ಕಳು, ಮೊಮ್ಮಕ್ಕಳು, ಸೊಸೆಯರ ಬಾಧೆ, ಅವರಿಗಾಗಿ ಹಿರಿಯ ಜೀವಗಳು ಈಗಲೂ ಕಾಣುತ್ತಿರುವ ಹಸಿಹಸಿ ಕನಸುಗಳು, ತಾವು ಕಂಡ ಕನಸುಗಳು ಸಾಕಾರಗೊಳ್ಳದೇ ಚಡಪಡಿಸುವ ಅವರ ಮಾತುಗಳು, ಮನಸ್ಸಿನಾಳದ ಬಾಧೆ, ಪದೇ ಪದೇ ಕೈಗೊಡುವ ಆರೋಗ್ಯ, ಎಡಬಿಡದೇ ಬಾಧಿಸುವ ಮಧುಮೇಹ, ರಕ್ತದೊತ್ತಡ, ಕೌಟುಂಬಿಕ ಒತ್ತಡಗಳು, ಧಾರ್ಮಿಕ ಸೆಳೆತ ಇನ್ನಿತರೆಗಳ ಮಾಹಿತಿ ಪಡೆದರು. ಹಿರಿಯ ಜೀವಗಳ ತಳಮಳ ಕಂಡು ಹಲವರಿಗೆ ಅಯ್ಯೋ ಪಾಪ ಅನ್ನಿಸಿದ್ದೂ ಸುಳ್ಳಲ್ಲ.

ಶ್ರೀ ಚೆಂಗಾರೆಡ್ಡಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗೂ ಭೇಟಿ ನೀಡಿದ ವಿದ್ಯಾರ್ಥಿಗಳು, ಬುದ್ಧಮಾಂದ್ಯ, ಅಂಗವಿಕಲ, ಅನಾಥ, ವಿಶಿಷ್ಟ ಮಕ್ಕಳ ಜೊತೆ ಕೆಲ ಕಾಲ ಇದ್ದು, ಅವರನ್ನು ಪೋಷಿಸಿ - ಬೆಳೆಸುವ ಜವಾಬ್ದಾರಿ, ಹೊಣೆಗಾರಿಕೆ, ಇರಬೇಕಾದ ತಾಳ್ಮೆಗಳನ್ನು ತಿಳಿದುಕೊಂಡರು. ಈ ರೀತಿ ವಿದ್ಯಾರ್ಥಿಗಳಿಗೆ ಕನಸು ತುಂಬಿ ಅಧ್ಯಯನ ಮಾಡಲು ಪ್ರೇರೇಪಿಸಿದ್ದು ಕಾಲೇಜಿನ ಉಪನ್ಯಾಸಕ ಡಾ. ಇಸ್ಮಾಯಿಲ್ ಮಕಂದಾರ್. ಇವರ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲಿಕ್ಕಾಗಿ ಕೆಲ ಬೋಧಕರು ಕೂಡ ಜೊತೆಗೂಡಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+