ಅಶೋಕ್ ಸಾರಿಗೆ ಖಾತೆಗೆ ಬಿತ್ತೇ ಬ್ರೇಕ್

ಸಾರಿಗೆ ಇಲಾಖೆ ಕುರಿತು ಮಾತನಾಡುತ್ತಿದ್ದ ಮುಖ್ಯಮಂತ್ರಿಯ ಗಮನ ದಿಢೀರನೆ, ವೇದಿಕೆಯಲ್ಲಿದ್ದ ಅಶೋಕ್ ಅವರತ್ತ ತಿರುಗಿತು. 'ಅಶೋಕ್ ಸಾರಿಗೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೂ ಒಂದು ಗೋಲ್ಡ್ ಮೆಡಲ್ ನೀಡಬೇಕಿತ್ತು. ಜತೆಗೆ, ಅವರು ಒಪ್ಪಿದರೆ ಇಂದೇ ಇಲಾಖೆಯಿಂದ ಬೀಳ್ಕೊಡುಗೆಯನ್ನೂ ನೀಡಬಹುದಿತ್ತು' ಎಂದು ಅಶೋಕ್ ಅವರತ್ತ ಬಾಂಬ್ ಎಸೆದರು.
ತಮ್ಮ ಈ ಮಾತಿಗೆ ಇನ್ನಷ್ಟು ವಿವರಣೆಯನ್ನೂ ನೀಡಿದ ಯಡಿಯೂರಪ್ಪ, ಸಾರಿಗೆ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರನ್ನು ಇಲ್ಲಿಯೇ ಉಳಿಸಲಾಗದು. ಮೇಲಾಗಿ ಅಶೋಕ್-ಗೆ ಗೃಹ ಸಚಿವ ಸ್ಥಾನದ ಹೊಣೆಯನ್ನೂ ವಹಿಸಿದ್ದೇವೆ ಎಂಬ ಮಾರ್ಮಿಕ ಮಾತನ್ನಾಡಿದರು. ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ಬ್ರೇಕ್ ಹಾಕಲು ಕಳೆದ ತಮ್ಮ ನಿವಾಸದಲ್ಲಿ ಕರೆದಿದ್ದ ಸಚಿವರು, ಶಾಸಕರ ಸಭೆಗೆ ಆರ್. ಅಶೋಕ್ ಹಾಜರಾಗಿರಲಿಲ್ಲ. ಆ ಸಂದರ್ಭದಲ್ಲಿ ಅಶೋಕ್ ವಿರುದ್ದ ಮುಖ್ಯಮಂತ್ರಿಯವರು ತಮ್ಮ ಅಸಮಾಧಾನ ಹೊರಹಾಕಿದ್ದರು. 'ಕಷ್ಟದಲ್ಲಿ ನೆರವಿಗೆ ಬರುತ್ತಾರೆ ಎಂದು ಎರಡು ಪ್ರಮುಖ ಖಾತೆಗಳನ್ನು ನೀಡಿದರೂ, ಸರಿಯಾದ ಸಮಯದಲ್ಲಿ ಕೈಕೊಟ್ಟರು' ಎಂದು ಆಪ್ತರ ಮುಂದೆ ಅಲವತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ಎದುರೇ ಯಡಿಯೂರಪ್ಪ ಈ ಘೋಷಣೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.












Click it and Unblock the Notifications