ಕೇಂದ್ರ ಬಜೆಟ್ಟಿನಲ್ಲಿ ಈ ಬಾರಿ ಮಹಿಳೆಯರಿಗೆ ಸುಣ್ಣ

ಪ್ರತಿ ವರ್ಷ ಮಹಿಳೆಯರಿಗೆ, ಪುರುಷರಿಗಿಂತ ಒಂದು ಕೈ ಮೇಲೆಯೇ ಎಂಬಂತೆ ತೆರಿಗೆ ಮಿತಿಯನ್ನು ಏರಿಸಿ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿತ್ತು ಕೇಂದ್ರ ಸರಕಾರ. ಈ ಬಾರಿಯೂ ತೆರಿಗೆ ಮಿತಿಯನ್ನು ಏರಿಸಲಾಗುತ್ತದೆ ಎಂದು ಕಾದಿದ್ದ ಮಹಿಳೆಯರಿಗೆ ಆಘಾತ ಕಾದಿತ್ತು. ಆದಾಯ ತೆರಿಗೆ ಮಿತಿಯನ್ನು 1.9 ಲಕ್ಷ ರು.ಗೆ ನಿಗದಿಪಡಿಸಿದ್ದಾರೆ.
ಪುರುಷ ವಲಯದಲ್ಲಿ ಕೂಡ ಆದಾಯ ತೆರಿಗೆ ಮಿತಿಯನ್ನು 1.6 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ನಮಗೂ ಬೇಡ, ನಿಮಗೂ ಬೇಡ ಎಂದು ಎರಡರ ನಡುವಿನ ಅಂಕಿ 1.8 ಲಕ್ಷ ರು.ಗೆ ನಿಗದಿಪಡಿಸಿದ್ದಾರೆ. ಇದರಿಂದ ಕನಿಷ್ಠ 2 ಸಾವಿರ ರು.ಯಷ್ಟು ಆದಾಯದಲ್ಲಿ ಉಳಿತಾಯ ಮಾಡಲು ಪುರುಷರಿಗೆ ಅವಕಾಶ ಕಲ್ಪಿಸಿದ್ದಾರೆ ಪ್ರಣಬ್.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಜಯನಗರ ಎರಡನೇ ಬ್ಲಾಕ್ ನ ಕಚೇರಿಯೊಂದರಲ್ಲಿ ಕೆಲಸದಲ್ಲಿರುವ ರೂಪಾ ಅವರು, ಇದು ತೀರಾ ಅನ್ಯಾಯ. ಪುರುಷರು ಮತ್ತು ಮಹಿಳೆಯರ ನಡುವಿನ ಆದಾಯ ತೆರಿಗೆ ಮಿತಿಯ ಅನುಪಾತ ಸರಿಸಮನಾಗಿರಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರುಷರಿಗೆ 20 ಸಾವಿರ ರು. ಏರಿಸಿದಂತೆ ಮಹಿಳೆಯರಿಗೂ 20 ಸಾವಿರ ರು.ನಷ್ಟು ಏರಿಸಬೇಕಾಗಿತ್ತು ಎಂಬುದು ಅವರ ಅಭಿಪ್ರಾಯ.
ಆದರೆ, ಸಾಫ್ಟ್ ಇಂಜಿನಿಯರಾಗಿ ಕೆಲಸದಲ್ಲಿರುವ ಮಂಜುನಾಥ್ ನಾಯ್ಕ್ ಅವರ ಅಭಿಪ್ರಾಯವೇ ಬೇರೆ. ಎಲ್ಲದರಲ್ಲೂ ಸರಿಸಮ ಇರಬೇಕೆಂದು ಬಯಸುವ ಮಹಿಳೆಯರಿಗೆ ಆದಾಯ ತೆರಿಗೆ ಮಿತಿಯಲ್ಲಿ ಏಕೆ ಹೆಚ್ಚಿಸಬೇಕು. ಅವರ ಆದಾಯ ತೆರಿಗೆ ಮಿತಿಯನ್ನೂ 1.9 ಲಕ್ಷ ರು.ನಿಂದ 1.8 ಲಕ್ಷ ರು.ಗೆ ಇಳಿಸಬೇಕು ಎಂಬುದು ಅವರ ಖಚಿತ ನುಡಿ.
ಇದಲ್ಲದೆ ಮತ್ತೊಂದು ಪೇಚಿನ ಸಂಗತಿಯೆಂದರೆ, ಬ್ರಾಂಡೆಡ್ ಚಿನ್ನಾಭರಣಗಳು ತುಟ್ಟಿಯಾಗುತ್ತಿರುವುದು. ಮಹಿಳೆಯ ಅಚ್ಚುಮೆಚ್ಚಿನ ಚಿನ್ನ ಈಗಾಗಲೆ ಆಕಾಶಕ್ಕೆ ಮುಖಮಾಡಿ ನಿಂತಿದೆ. ಹೆಣ್ಣುಗಳನ್ನು ಹೆತ್ತ ಪಾಲಕರ ಗೋಳಾಟವಂತೂ ಕೇಳುವುದೇ ಬೇಡ. ಪರಿಸ್ಥಿತಿ ಹೀಗಿರುವಾಗ, ಗಾಯದ ಮೇಲೆ ಬರೆ ಎಂಬಂತೆ ಮಹಿಳೆಯರ ಆದಾಯ ತೆರಿಗೆ ಮಿತಿಯನ್ನೂ ಏರಿಸದಿರುವುದು.












Click it and Unblock the Notifications