ಎ.ರಾಜಾ ಹೊಗಳಿದ ಟಾಟಾ ಪತ್ರ ಬಂದಿಲ್ಲ:ಕರುಣಾ

ಎ.ರಾಜಾರ 'ಪರಿಣಾಮಕಾರಿ"ಯಾದ ದೂರಸಂಪರ್ಕ ನೀತಿಗಳ ಬಗ್ಗೆ ಶ್ಲಾಘಿಸಿ ರತನ್ ಟಾಟಾ, ಡಿಎಂಕೆ ಮುಖ್ಯಸ್ಥ ಕರುಣಾ ನಿಧಿಯವರಿಗೆ ಬರೆದಿರುವ ಪತ್ರವನ್ನು ಸಿಎನ್‌ಎನ್-ಐಬಿಎನ್ ಬಹಿರಂಗ ಪಡಿಸಿದೆ. ಆದರೆ, ಇಂತಹ ಯಾವುದೇ ಪತ್ರ ತನಗೆ ಬಂದಿಲ್ಲ ಎಂದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.
ದೂರಸಂಪರ್ಕ ಖಾತೆಯ ಸಚಿವ ಎ.ರಾಜಾರ ರೇಡಿಯೊ ತರಂಗಾಂತರ ಹಂಚಿಕೆಯ ನೀತಿ ವೈಚಾರಿಕ ಮತ್ತು ತರ್ಕಬದ್ಧವಾಗಿದೆ. ದೂರಸಂಪರ್ಕ ಕ್ಷೇತ್ರದ ಸಾಧನೆ ಡಿಎಂಕೆಯ ಪ್ರಮುಖ ಸಾಧನೆಯಾಗಿದೆ ಎಂದೂ ರತನ್ ಟಾಟಾ ಪತ್ರದಲ್ಲಿ ಬರೆದಿದ್ದರು ಎಂದು ಸಿಎನ್‌ಎನ್ ತಿಳಿಸಿದೆ. ಟಾಟಾ ಬರೆದ ಈ ಪತ್ರವನ್ನು ಕಾರ್ಪೊರೇಟ್ ಲಾಬಿ ನೀರಾ ರಾಡಿಯಾ ಮೂಲಕ ಕರುಣಾನಿಧಿಗೆ ತಲುಪಿಸಲಾಗಿತ್ತು. ಆದರೆ, ಇಂತಹ ಯಾವುದೇ ಪತ್ರವನ್ನು ತಾವು ಸ್ವೀಕರಿಸಿಲ್ಲ ಎಂದು ಪಕ್ಷದ ಮುಖವಾಣಿ 'ಮುರಸೋಳಿ"ಯಲ್ಲಿ ಹೇಳಿದ್ದಾರೆ.
ರತನ್ ಟಾಟಾ ಕರುಣಾನಿಧಿಗೆ ಬರೆದಿರುವ ಪತ್ರದಲ್ಲಿ ರಾಜಾ ಸಂಪರ್ಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನ್ಯಾಯಸಮ್ಮತವಾದ ಅತ್ಯುತ್ತಮವಾದ ತೀರ್ಮಾನಗಳನ್ನು ತೆಗೆದುಕೊಂಡು ತಮ್ಮ ಸಚಿವಾಲಯಕ್ಕೆ ಅತ್ಯುತ್ತಮ ನಾಯಕತ್ವ ನೀಡಿದ್ದರು ಎಂದು ಸಿಎನ್‌ಎನ್ ಐಬಿಎನ್ ಪತ್ರವನ್ನು ಉಲ್ಲೇಖಿಸಿ ಸುದ್ದಿ ಪ್ರಸಾರ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಟಾಟಾ ಟೆಲಿ ಸರ್ವಿಸ್ ಲಿ. (TTSL), ಎ.ರಾಜಾ ಬಗ್ಗೆ ಬರೆದ ಪತ್ರಕ್ಕೂ ಈಗಿನ 2ಜಿ ಹಗರಣಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ತರಂಗಾಂತರ ಹಂಚಿಕೆಯ ನೀತಿ ಹಾಗೂ ನಿಯಮಾವಳಿಗಳ ಅಳವಡಿಕೆ ವಿಳಂಬದ ಬಗ್ಗೆ ಪ್ರಸ್ತಾಪಿಸಲಾಗಿದೆ ಅಷ್ಟೇ ಎಂದಿದೆ.












Click it and Unblock the Notifications