ಕರ್ತವ್ಯ ನಿರತ ಜಿಲ್ಲಾಧಿಕಾರಿಯ ಸಜೀವ ದಹನ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ 10 ಕಿ.ಮೀ. ದೂರದಲ್ಲಿರುವ ಮನಮಾದ್ ನಲ್ಲಿ ಈ ದುರಂತ ಸಂಭವಿಸಿದೆ. ಹತರಾಗಿರುವವರು ಮಾಲೆಗಾಂವ್ ನ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆ. ಅಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ದಂಧೆಯಲ್ಲಿ ತೊಡಗಿದ್ದ ಪಾತಕಿಗಳು ಈ ನಿರ್ಮಾನುಷ ಕೃತ್ಯವೆಸಗಿದ್ದಾರೆ.
ತಹಸೀಲ್ದಾರ್ ಭೇಟಿಗೆಂದು ಯಶವಂತ್ ಅವರು ನಂದಗಾಂವ್ ಗೆ ಹೊರಟಿದ್ದ ಸಂದರ್ಭದಲ್ಲಿ ಐಓಸಿ, ಎಚ್ ಪಿಸಿಎಲ್ ಪೆಟ್ರೋಲ್ ಬಂಕ್ ಬಳಿ ಕೆಲ ಟ್ರಕ್ ಗಳನ್ನು ನಿಲ್ಲಿಸಿದ್ದನ್ನು ವೀಕ್ಷಿಸಿದ್ದಾರೆ. ಅನುಮಾನ ಬಂದು ಕಾರಿನಿಂದ ಇಳಿದು ವಿಚಾರಣೆಗೆ ಯಶವಂತ್ ತೊಡಗಿದ್ದಾರೆ. ಆಗ ಪೆಟ್ರೋಲ್ ಕಾಳಸಂತೆಗೆ ಕುಖ್ಯಾತನಾಗಿರುವ ಪೋಪಟ್ ಶಿಂಧೆ ಮತ್ತಿತರರು ದಾಳಿ ನಡೆಸಿ ಯಶವಂತ್ ರನ್ನು ಸಜೀವವಾಗಿ ಸುಟ್ಟಹಾಕಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ಅತ್ಯಂತ ದಕ್ಷ ಅಧಿಕಾರಿಯೆಂದು ಹೆಸರು ಪಡೆದಿದ್ದ ಯಶವಂತ್ ಅವರ ಜೊತೆ ಒಬ್ಬ ಸಹಾಯಕ ಮತ್ತು ಸಿಬ್ಬಂದಿಯೊಬ್ಬರಿದ್ದರೆಂದು ತಿಳಿದುಬಂದಿದೆ. ಕೆಲ ಮಾಹಿತಿಯ ಪ್ರಕಾರ ಪೆಟ್ರೋಲ್ ಕಾಳಸಂತೆಯ ಬಗ್ಗೆ ಒಂದು ವಾರದ ಹಿಂದೆಯೇ ಅವರಿಗೆ ಮಾಹಿತಿ ಲಭಿಸಿತ್ತು. ಇಂಥ ದಂಧೆಗೆ ಕುಖ್ಯಾತಿ ಪಡೆದ ಆ ಪ್ರದೇಶಕ್ಕೆ ಹೋಗುವಾಗ ಪೊಲೀಸ್ ರಕ್ಷಣೆಯನ್ನು ಪಡೆಯದಿರುವುದು ಯಶವಂತ್ ಅವರಿಗೆ ಮುಳುವಾಗಿದೆ.
ಈ ಭೀಕರ ಪ್ರಕರಣದ ತನಿಖೆ ನಡೆಸಬೇಕೆಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚಹ್ವಾಣ್ ಆದೇಶಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. [ದುರಂತ]












Click it and Unblock the Notifications