ಎರಡೇ ನಿಮಿಷದಲ್ಲಿ ಅಧಿವೇಶನ ಮೊಟಕು!

ಎರಡೇ ನಿಮಿಷದಲ್ಲಿ ರಾಜ್ಯಪಾಲರು ಭಾಷಣವನ್ನು ಕಾಟಾಚಾರಕ್ಕೆ ಓದಿದಂತೆ ಮಾಡಿ ಎಷ್ಟು ವೇಗದಲ್ಲಿ ಬಂದರೋ ಅಷ್ಟೇ ವೇಗದಲ್ಲಿ ವಿಧಾನಸಭೆಯಿಂದ ರಾಜಭವನಕ್ಕೆ ತೆರಳಿದರು. ನಿಗದಿಪಡಿಸಿದ 12 ಗಂಟೆಗೆ ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಿದರು. ಆದರೆ, ನಾನಾ ಹಗರಣಗಳಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡುವವರೆಗೆ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷದ ಶಾಸಕರು ರಾಜ್ಯಪಾಲರಿಗೆ ಭಾಷಣ ಮಾಡಲು ಅವಕಾಶವನ್ನೇ ನೀಡಲಿಲ್ಲ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿ ಸರಕಾರ ಸಿದ್ಧಪಡಿಸಿಕೊಂಡಿದ್ದ 28 ಪುಟಗಳ ಭಾಷಣವನ್ನು 'ಮೈ ಗೌರ್ನಮೆಂಟ್' ಎಂದು ಆರಂಭ ಮಾಡುತ್ತಿದ್ದಂತೆಯೇ ಪ್ರತಿಪಕ್ಷಗಳು ರಾಜ್ಯಪಾಲರೇ ಭಾಷಣ ಮಾಡಬೇಡಿ ಎಂದು ಕೂಗಾಟ ಆರಂಭಿಸಿದರು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಬಂಧುಮಿತ್ರರಿಗೆಲ್ಲ ನಿವೇಶನ ಹಂಚಿದ ಆರೋಪ ಹೊತ್ತಿರುವ ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕು ಎಂದು ಪಟ್ಟುಹಿಡಿದರು. ಅವರು ರಾಜೀನಾಮೆ ನೀಡುವರೆಗೆ ಹತ್ತು ದಿನವೂ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ.
ಮೊದಲು ಶಂಕರಮೂರ್ತಿ ಅವರ ನೆರವು ಬಯಸಿದ ರಾಜ್ಯಪಾಲರು ಅನಂತರ ಸ್ಪೀಕರ್ ಸಹಕಾರ ಕೋರಿದರು. ಇಬ್ಬರೂ ಮುಖಂಡರು ಗದ್ದಲದಿಂದಾಗಿ ಭಾಷಣವನ್ನು ಸದನದಲ್ಲಿ ಮಂಡನೆ ಮಾಡಲಾಗಿದೆ ಎಂಬ ಸಲಹೆಯನ್ನು ಕೊಟ್ಟರು. ಇದಾದ ನಂತರ ರಾಜ್ಯಪಾಲರು ಭಾಷಣವನ್ನು ಮಂಡಿಸಲಾಗಿದೆ ಎಂದು ಹೇಳಿದರು. ಇದು ಮುಗಿದ ತಕ್ಷಣವೇ ರಾಷ್ಟ್ರಗೀತೆ ಮೊಳಗಿತು. ಇದೆಲ್ಲವೂ ಕೇವಲ ಎರಡೇ ನಿಮಿಷದಲ್ಲಿ ಮುಗಿದು ಹೋಯಿತು.












Click it and Unblock the Notifications