ಜಿಪಂ ಫಲಿತಾಂಶ : ಕುರ್ಚಿ ಉಳಿಸಿಕೊಂಡ ಯಡಿಯೂರಪ್ಪ

ಆದರೆ, ಬಿಜೆಪಿ ಭದ್ರಕೋಟೆ ಎನಿಸಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ರೆಡ್ಡಿ ಸಹೋದರರ ಸದ್ದಡಗಿಸಿದರೆ, ಉತ್ತರ ಕನ್ನಡದಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿದೆ. ಶೇ. 80 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಅಲ್ಲಿಗೆ ಮಾತ್ರ ಸೀಮಿತಗೊಳಿಸಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿವಮೂಗ್ಗದಲ್ಲಿ ಸ್ವಲ್ಪದಲ್ಲೇ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಯಡಿಯೂರಪ್ಪ ಮುಂದಾಗಲಿದ್ದ ಮುಖಭಂಗವನ್ನು ತಪ್ಪಿಸಿಕೊಂಡಿದ್ದಾರೆ.
ಉಳಿದಂತೆ ರಾಮನಗರ, ಹಾಸನ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದ್ದರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಪ್ರದೇಶದ ಜನರು ಮಾತ್ರ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಜಾತಿ ಸಮೀಕರಣ ಗಣನೆಗೆ ತೆಗೆದುಕೊಂಡರೆ, ಉತ್ತರ ಕರ್ನಾಟಕದಲ್ಲಿ ಲಿಂಗಾಯಿತ ಜನಾಂಗ ಹೆಚ್ಚಿದೆ. ಲಿಂಗಾಯಿತರ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿಯನ್ನು ಅಲ್ಲಿನ ಮತದಾರ ಮತ್ತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕೆಲವಡೆ ಅನಿರೀಕ್ಷಿತ ಫಲಿತಾಂಶ ಹೊರತುಪಡಿಸಿ ಉಳಿದೆಡೆ ಎಲ್ಲ ಬಿಜೆಪಿ ನಿರೀಕ್ಷಿತ ಫಲಿತಾಂಶ ಮೂಡಿಬಂದಿದೆ.
ರೆಡ್ಡಿಗಳಿಗೆ ಮುಖಭಂಗ : ಈ ಜಿಲ್ಲಾ ಪಂಚಾಯಿತಿ ಚುನಾವಣೆ ರೆಡ್ಡಿ ಸಹೋದರರಿಗೆ ಹಿನ್ನೆಡೆಯಾಗಿದೆ. ಬಳ್ಳಾರಿಯ 35 ಜಿಪಂ ಸ್ಥಾನಗಳಲ್ಲಿ 18 ಬಿಜೆಪಿ ಗೆಲುವು ಸಾಧಿಸಿದರೆ, 17 ಕಾಂಗ್ರೆಸ್ ಮತ್ತು 1 ಸ್ಥಾನವನ್ನು ಜೆಡಿಎಸ್ ಜಯಗಳಿಸಿದ್ದು, ಮಹತ್ವದ ರಾಜಕೀಯ ಬದಲಾವಣೆಗೆ ನಾಂದಿಯಾಗಿದೆ. ಕಂದಾಯ ಸಚಿವ ಕರುಣಾಕರರೆಡ್ಡಿ ಪ್ರತಿನಿಧಿಸುವ ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ರೆಡ್ಡಿಗಳಿಗೆ ಪ್ರಮುಖ ಹಿನ್ನೆಡೆ. ಮಾಜಿ ಉಪಮುಖ್ಯಮಂತ್ರಿ ಎಂ ಪಿ ಪ್ರಕಾಶ್ ಅವರ ಮಗ ಎಂಪಿ ರವೀಂದ್ರ ಉಸ್ತುವಾರಿಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಜಯ ಗಳಿಸಿದೆ ಎನ್ನುವುದು ವಿಶೇಷ.
ಹಾಸನ ಸಂಪೂರ್ಣ ಜೆಡಿಎಸ್ ಮಯವಾಗಿದೆ. 40 ಸ್ಥಾನಗಳಲ್ಲಿ 33 ಸ್ಥಾನಗಳಲ್ಲಿ ಅರ್ಹ ಜಯ ದಾಖಲಿಸುವ ಮೂಲಕ ದೇವೇಗೌಡರು ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲೂ ಜೆಡಿಎಸ್ ಭರ್ಜರಿ ವಿಜಯ ಸಾಧಿಸಿದೆ. ತುಮಕೂರು ಮತ್ತು ಕೋಲಾರದಲ್ಲಿ ಜೆಡಿಎಸ್ ಪವಾಡಸದೃಶವಾಗಿ ಜಯ ಗಳಿಸಿರುವುದು ಅಚ್ಚರಿ ಮೂಡಿಸಿದೆ.
ಉತ್ತರ ಕನ್ನಡ ಹೊರತುಪಡಿಸಿದರೆ, ರಾಜ್ಯದ ಉಳಿದ ಕಡೆಗೆ ಕಾಂಗ್ರೆಸ್ ಸ್ಥಿತಿ ಚಿಂತಾಜನಕವಾಗಿದೆ. ಕೆಪಿಸಿಸಿಗೆ ನೂತನ ಸಾರಥಿ ಪರಮೇಶ್ವರ ಅವರಿಗೂ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅವರ ಸಾಮರ್ಥ್ಯವನ್ನು ಅಳೆಯುವುದು ಸಮಂಜಸವಲ್ಲ ಎನ್ನುವುದು ನಿಜವಾದರೂ ಜಂಗು ಹಿಡಿದಿರುವ ಕಾಂಗ್ರೆಸ್ ಪಕ್ಷವನ್ನು ಕನ್ನಡಿಗರು ಮರೆಯುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. [ಪಂಚಾಯಿತಿ ಚುನಾವಣೆ]












Click it and Unblock the Notifications