ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ಇಂಡಿಯಾ ಹುಟ್ಟುಹಬ್ಬದ ಟಿಪ್ಪಣಿಗಳು

By Prasad
|
Google Oneindia Kannada News

2006ರ ಜನವರಿ 1ರಂದು ಜನ್ಮತಾಳಿದ ಒನ್ ಇಂಡಿಯಾ.ಇನ್ ಈಗ ಐದರ ತುಂಟ ಪೋರನಾಗಿ ಬೆಳೆದು ನಿಂತಿದ್ದಾನೆ. ಕಳೆದ ಐದು ಸಂವತ್ಸರಗಳಲ್ಲಿ ನಮ್ಮ ಕಂಪನಿ ಅನೇಕ ಏರಿಳಿತಗಳನ್ನೂ ಕಂಡಿದೆ. ಅಭ್ಯುದಯದ ದೃಷ್ಟಿಯಿಂದ 2010ರ ವರ್ಷವಂತೂ ನಮ್ಮ ಕಂಪನಿಗೆ ಅತ್ಯಂತ ಮಹತ್ವದ್ದಾಗಿತ್ತು. ನಮ್ಮ ಈ ಬೆಳವಣಿಗೆಗೆ ಕಾರಣರಾದ ಓದುಗರು ಮತ್ತು ಜಾಹೀರಾತುದಾರರಿಗೆ ವಿಶೇಷವಾದ ಧನ್ಯವಾದಗಳು. ಇವರಿಬ್ಬರ ಬೆಂಬಲವಿಲ್ಲದಿದ್ದರೆ ನಾವೀಗ ತಲುಪಿರುವ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತಲೇ ಇರಲಿಲ್ಲ.

ಐದು ವರ್ಷಗಳ ಹಿಂದೆ ಜನವರಿಯಲ್ಲಿ ನಮ್ಮ ಕಂಪನಿ ಹುಟ್ಟು ಪಡೆದಿದ್ದರೂ ಒನ್ ಇಂಡಿಯಾ.ಇನ್ ಎಂದು ನಾಮಕರಣವಾದದ್ದು ಫೆಬ್ರವರಿಯಲ್ಲಿ. ಮುದ್ದಾದ ಅರ್ಥವತ್ತಾದ ಹೆಸರು ಪಡೆದ ನಂತರ, ಇಂಟರ್ನೆಟ್ ಜಗತ್ತಿನಲ್ಲಿ ಹೆಸರು ಗಳಿಸುತ್ತ ಸಾಗಿದೆ ಒನ್ ಇಂಡಿಯಾ.

ಹೊಸ ಕಂಪನಿಯ ಹುಟ್ಟು ಸಹಜವಾಗಿ ಸಂತೋಷ ಮತ್ತು ಆತಂಕಗಳೆರಡನ್ನೂ ಹುಟ್ಟುಹಾಕಿತ್ತು. ನಮ್ಮೆಲ್ಲರ ಜಠರದಲ್ಲಿ ಪಾತರಗಿತ್ತಿಗಳು ಓಡಾಡಿದ್ದು ಸುಳ್ಳಲ್ಲ. ಭಾರತೀಯ ಭಾಷೆಯಲ್ಲಿ ಪೋರ್ಟಲ್ ವ್ಯವಹಾರವನ್ನು ಆರಂಭಿಸಿದ್ದರಿಂದ 2006ರಲ್ಲಿ ಆನ್ ಲೈನ್ ಜಾಹೀರಾತು ಅಂತಹ ಆಶಾದಾಯಕವಾಗೇನೂ ಇರಲಿಲ್ಲ. ಪ್ರಾದೇಶಿಕ ಭಾಷಾ ವೆಬ್ ಸೈಟುಗಳಲ್ಲಿ ಜಾಹೀರಾತು ನೀಡಲು ಜಾಹೀರಾತುದಾರರು ಹಿಂಜರಿಯುತ್ತಿದ್ದ ಕಾಲವದು.

Oneindia

ಇದೇ ಹಂತದಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿಯೂ ಇದ್ದ ಭಾರತದ ಪ್ರಪ್ರಥಮ ಜಾಹೀರಾತು ಅಂತರ್ಜಾಲ ತಾಣ click.in ಪ್ರಾರಂಭಿಸಿದೆವು. ಭವಿಷ್ಯದಲ್ಲಿ ಭಾರತದ ಪ್ರಾದೇಶಿಕ ಭಾಷಾ ಬಳಕೆದಾರರ ಸೇವೆ ಅಗತ್ಯ ಎಂಬ ಮುಂದಾಲೋಚನೆಯಿಂದ ಪ್ರಾರಂಭಿಸಿದ್ದ ತಾಣವಿದು. ಆರಂಭದಲ್ಲಿ ಕೆಲ ಯುರೋಪಿನ ನಾಗರಿಕರೊಂದಿಗೂ ಈ ವೆಬ್ ಸೈಟ್ ನಿರ್ಮಾಣಕ್ಕಾಗಿ ಶ್ರಮಿಸಿದ್ದುದು ನಮ್ಮ ಕಲಿಕೆಯ ಆವರಣವನ್ನು ಇನ್ನಷ್ಟು ವಿಸ್ತರಿಸಿತ್ತು.

ಸೋಲೇ ಗೆಲುವಿನ ಮೆಟ್ಟಿಲು

ಯಾವುದೇ ಆರಂಭಿಕ ಇಂಟರ್ನೆಟ್ ಕಂಪನಿಯಂತೆ ವೆಂಚರ್ ಕ್ಯಾಪಿಟಲಿಸ್ಟ್ ಗಳಿಂದ ಹಣ ಕ್ರೋಢೀಕರಿಸುವ ಹಂತವನ್ನೂ ನಾವು ದಾಟಿ ಬರಬೇಕಾಯಿತು. ಆ ಹಂತ ಬಲು ಕಷ್ಟದ್ದಾಗಿತ್ತು. ಭಾರತೀಯ ಭಾಷೆಯೊಂದಿಗಿದ್ದ ನಮ್ಮ ಪ್ಯಾಷನ್ ಅನ್ನು ಗುರುತಿಸುವ ತಾಳ್ಮೆ ಯಾರಲ್ಲೂ ಇರಲಿಲ್ಲ. ಇಂಟರ್ನೆಟ್ ಜಗತ್ತಿನಲ್ಲಿ ಭಾರತೀಯ ಭಾಷೆಗಳಿಗೆ ಸ್ಥಾನ ಸಿಗಲಿದೆ ಎಂಬ ವಿಶ್ವಾಸವೂ ಅನೇಕರಲ್ಲಿ ಇರಲಿಲ್ಲ. ಆ ಪ್ರಯತ್ನದಲ್ಲಿ ನಾವು ಸೋತೆವು. ಹಾಗಾಗಿ, ನಮ್ಮ ಸ್ವಶಕ್ತಿಯಿಂದಲೇ ಸಾಧಿಸಿ ತೋರಿಸಬೇಕೆಂಬ ನಮ್ಮ ಹಂಬಲವನ್ನು ಈ ಸೋಲು ಇನ್ನಷ್ಟು ಗಟ್ಟಿಗೊಳಿಸಿತು. ನಂಬಿಕಾರ್ಹವಾದ ತಂಡ ಕಟ್ಟಿಕೊಂಡ ನಾವು ಧೈರ್ಯದಿಂದ ಮುಂದೆ ಹೆಜ್ಜೆ ಇಟ್ಟೇಬಿಟ್ಟೆವು.

ಇನ್ನೂ ಕೆಲ ಬೆಳವಣಿಗೆಗಳು ನಮ್ಮ ಸಂಸ್ಥೆಯಲ್ಲಾದವು. ಕೆಲ ಯುವಕರು ಲಗುಬಗೆಯಿಂದ ಹಸೆಮಣೆಯೇರಲು ಪ್ರಾರಂಭಿಸಿದರು (ಹೀಗಾಗಿ ಮೊದಲ ವರ್ಷ ಸಹಜವಾಗಿ ಮನೆಯಲ್ಲಿ ಜಾಸ್ತಿ ಮತ್ತು ಕಚೇರಿಯಲ್ಲಿ ಕಡಿಮೆ ಸಮಯ ಕಳೆಯಲು ಆರಂಭಿಸಿದರು.) ಮತ್ತೆ ಕೆಲ ಹುಡುಗಿಯರು ತಾಯಿ ಸ್ಥಾನಕ್ಕೂ ಬಡ್ತಿ ಪಡೆದರು (ಮನೆಯಲ್ಲೂ ಹೆಚ್ಚಿನ ಜವಾಬ್ದಾರಿ). ಕೆಲವರು 40ರ ಮಹತ್ವದ ಗಡಿಯನ್ನೂ ದಾಟಿದರು!

ಮುಂದಿನ ಹಾದಿ ಕಠಿಣವಾಗಿತ್ತು. ಆ ಹಾದಿಯನ್ನು ಸುಗಮವಾಗಿಸಲು ಸಾಕಷ್ಟು ಬೆವರನ್ನೂ ಹರಿಸಬೇಕಾಯಿತು. ಸಾಕಷ್ಟು ಸಾಧಿಸುವ ಉಮೇದಿದ್ದರೂ ಹಣಕಾಸಿನ ತೊಂದರೆ ತೊಡರುಗಾಲು ಹಾಕುತ್ತಿತ್ತು. 2010ರಲ್ಲಿ ಹೊಸ ಶಕೆ ಆರಂಭವಾಯಿತು. ಏಪ್ರಿಲ್ ತಿಂಗಳಲ್ಲಿ ರಾಜೇಶ್ ಜೈನ್ ಅವರ ನೆಟ್ ಕೋರ್ ಕಂಪನಿ ಒನ್ ಇಂಡಿಯಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ನೆಟ್ ಕೋರ್ ಮ್ಯಾನೇಜ್ ಮೆಂಟ್ ನಮ್ಮೊಂದಿಗೆ ಅನೇಕ ಘಟ್ಟಗಳಲ್ಲಿ ಹೆಗಲಿಗೆ ಹೆಗಲಾಗಿ ಕಾರ್ಯ ನಿರ್ವಹಿಸಿದೆ. ನಿರೀಕ್ಷೆಯಂತೆ ಎರಡೂ ಕಂಪನಿಗಳ ಸಂಗಮ ಉತ್ತಮ ಫಲವನ್ನು ನೀಡಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಉತ್ತಮ ಸೌಕರ್ಯಗಳಿದ್ದ ಹೊಸ ಕಚೇರಿಗೆ ನಮ್ಮ ಸಂಸ್ಥೆ ಸ್ಥಳಾಂತರಗೊಂಡಿತು. ಇದು ಕಂಪನಿ ಇನ್ನಷ್ಟು ಬೆಳೆಯಲು ಸಹಕಾರಿಯಾಗುತ್ತದೆಂಬ ಆಶಾವಾದ ನಮ್ಮದು.

ಇಂಟರ್ನೆಟ್ ಹಾದಿ

ಭಾರತದಲ್ಲಿ ಹೆಚ್ಚುಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ತಲುಪಬೇಕೆಂಬ ಹಂಬಲ ನಮ್ಮಲ್ಲಿದ್ದರೂ ನಮ್ಮ ದೇಶದಲ್ಲಿ ಇಂಟರ್ನೆಟ್ ಕ್ರಮಿಸಿರುವ ದೂರ ಅತೀ ಕಡಿಮೆ. ಆದರೆ, ಇಂಟರ್ನೆಟ್ ಗ್ಲಾಸ್ ಖಾಲಿಯಾಗಿರುವುದರಿಂದ ನಿರಾಶರಾಗಬೇಕಾದ ಕಾರಣವೂ ಇಲ್ಲ. ನಾವು ಇದನ್ನು ನಮಗೆ ಸಿಕ್ಕ 'ಅವಕಾಶ'ವೆಂದೇ ಭಾವಿಸುತ್ತೇವೆ. 2011ರ ಕೊನೆ ಅಥವಾ 2012ರ ಆರಂಭದಲ್ಲಿ ವೈರ್ ಲೆಸ್ ಬ್ರಾಡ್ ಬ್ಯಾಂಡ್ ನಿಂದಾಗಿ ಈ ಖಾಲಿ ಜಾಗ ಖಂಡಿತ ತುಂಬುತ್ತದೆ.

ಮೊಬೈಲ್ ಕ್ರಾಂತಿ

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಭಾರೀ ಕ್ರಾಂತಿಯನ್ನು ಉಂಟುಮಾಡಿದೆ. ವ್ಯಾಪ್ ಮತ್ತು ಎಸ್ಎಮ್ಎಸ್ ಕ್ಷೇತ್ರದಲ್ಲಿ ಒನ್ ಇಂಡಿಯಾ ಸಾಕಷ್ಟು ಪ್ರಗತಿಯನ್ನು ಕಂಡಿದೆ. ಮೊಬೈಲಲ್ಲಿ ಭಾರತೀಯ ಭಾಷೆ(ಇಂಡಿಕ್)ಗೆ ಬೆಂಬಲವಿದ್ದರೆ ಇನ್ನಷ್ಟು ಪ್ರಗತಿಯನ್ನು ಕಾಣಲು ಸಾಧ್ಯವಿದೆ. ದುರಾದೃಷ್ಟವೆಂದರೆ, ಕೆಲವೇ ಕೆಲವು ಮೊಬೈಲುಗಳು ಇಂಡಿಕ್ ಬೆಂಬಲ ಹೊಂದಿವೆ. ಇಂಡಿಕ್ ಬೆಂಬಲವಿಲ್ಲದ ಮೊಬೈಲ್ ನಲ್ಲಿಯೂ ಬೆಂಬಲ ದೊರಕಿಸುವ ನಿಟ್ಟಿನಲ್ಲಿ ನಾವು ಯಶಸ್ಸನ್ನೂ ಕಂಡಿದ್ದೇವೆ. ನ್ಯೂಸ್ ಹಂಟ್ ನಲ್ಲಿ ನಮ್ಮ ಪ್ರಾಡಕ್ಟನ್ನು ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಿದ್ದು, ಸುದೈವವಶಾತ್ ಸಾಕಷ್ಟು ಯಶಸ್ಸು ದಕ್ಕಿದೆ ಎಂದು ತಿಳಿಸಲು ಸಂತಸವಾಗುತ್ತದೆ.

ಭಾರತದಲ್ಲಿ ಇಂಡಿಕ್ ಬಳಕೆ

ಡಿಜಿಟಲ್ ಕ್ಷೇತ್ರದಲ್ಲಿ ಭಾರತೀಯ ಭಾಷೆಯಲ್ಲಿ ಅನೇಕ ದಿಟ್ಟ ಪ್ರಯೋಗಗಳನ್ನು ನಡೆಸಿದ ಏಕೈಕ ಕಂಪನಿ ಒನ್ ಇಂಡಿಯಾ ಎಂದರೆ ಉತ್ಪ್ರೇಕ್ಷೆಯಾಗಲಾರದು. ಪ್ರಾದೇಶಿಕ ಭಾಷೆಯಲ್ಲಿ ನಾವು ನೀಡುತ್ತಿರುವ ಕ್ರಿಕೆಟ್ ಸ್ಕೋರ್ ವಿವರ ನಮ್ಮ ಓದುಗರಲ್ಲಿ ಪ್ರೀತಿಯನ್ನು ಗಳಿಸಿದೆ. ಡಿಜಿಟಲ್ ಕ್ಷೇತ್ರದಲ್ಲಿ ಪ್ರತಿಯೊಂದು ಸೇವೆಯೂ ಪ್ರಾದೇಶಿಕ ಭಾಷೆಯಲ್ಲಿಯೇ ಇರಬೇಕೆಂಬ ಮಹತ್ವಾಕಾಂಕ್ಷೆ ನಮ್ಮದು. ಎಲ್ಲಿ ಯಶಸ್ಸು ಸಿಗುತ್ತದೋ ಅಲ್ಲಿ ಸ್ಪರ್ಧೆ ಇದ್ದೇ ಇರುತ್ತದಲ್ಲವೆ? ಕೆಲ ಮಾಧ್ಯಮ ಸಂಸ್ಥೆಗಳು ಇಂಟರ್ನೆಟ್ ಸಮುದ್ರದಲ್ಲಿ ಪ್ರಾದೇಶಿಕ ಭಾಷಾ ದೋಣಿಯಲ್ಲಿ ಸಾಗುವ ಯತ್ನಕ್ಕೆ ಕೈಹಾಕಿವೆ. ಅವರಿಗೆ ನಮ್ಮ ಹಾರ್ದಿಕ ಸ್ವಾಗತ.

ವಿಕಿಪೀಡಿಯಾದ 10ನೇ ವಾರ್ಷಿಕೋತ್ಸವ ಜನವರಿ 15ರಂದು ನಡೆಯಲಿದೆ. ಭಾರತೀಯ ಭಾಷೆಯಲ್ಲಿ ಮಾಹಿತಿ ದೊರಕಬೇಕೆಂಬ ಆಶಯವನ್ನು ವಿಕಿಪೀಡಿಯಾ ಅನೇಕ ವರ್ಷಗಳಿಂದ ವ್ಯಕ್ತಪಡಿಸಿದೆ. ಅನೇಕ ವಿಕಿಪೀಡಿಯಾ ಬಳಕೆದಾರರು ಈ ನಿಟ್ಟಿನಲ್ಲಿ ಸಕ್ರಿಯರೂ ಆಗಿದ್ದಾರೆ.

ಮುಂದಿನ ವರ್ಷ, ಅಂದರೆ 2011 ಪ್ರಾದೇಶಿಕ ಭಾಷೆಗೆ ಇಂಟರ್ನೆಟ್ ಮುಡಿಪಾಗಿರಲಿ. ಒನ್ ಇಂಡಿಯಾ ಈ ವರ್ಷದಲ್ಲಿ ಇನ್ನಷ್ಟು ಬೆಳೆಯಲು ನಮ್ಮ ಪ್ರಿಯ ಓದುಗರ ಬೆಂಬಲ ಮತ್ತು ಮಾರ್ಗದರ್ಶನ ಇದ್ದೇ ಇರುತ್ತದೆಂಬ ಆಶಯ ನನ್ನದು. ನಾವು ಇನ್ನಷ್ಟು ಎತ್ತರಕ್ಕೆ ಏರಲು ಮತ್ತು ನಿಮಗೆ ಮತ್ತಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಿಮ್ಮ ಸಲಹೆಗಾಗಿ ಕಾಯುತ್ತಿರುತ್ತೇನೆ.

ಒನ್ ಇಂಡಿಯಾ ತಂಡದ ವತಿಯಿಂದ ಹಾರ್ದಿಕ ಶುಭಾಶಯಗಳು.

* ಬಿಜಿ ಮಹೇಶ್, ಸಿಇಓ
[email protected]

English summary
Anniversary Message from BG Mahesh, CEO:Oneindia.in completes 5 years of operation. It was not an easy journey but was fun. I would like to share my thoughts on the journey so far. We believe in languages and feel honored to serve the language community in India, after all the non-English speaking community is the majority in India but under served on the internet. We promise to bring you better things in the coming years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X