ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ

ಶಕ್ತಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ. ಕಟ್ಟಾ ನೀಡಿರುವ ರಾಜೀನಾಮೆ ಪತ್ರವನ್ನು ಸ್ವೀಕರಿಸಲಾಗಿದ್ದು, ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕೆಐಎಡಿಬಿ ಭೂಹಗರಣದಲ್ಲಿ ಪ್ರಧಾನ ಆರೋಪಿಯಾಗಿದ್ದ ಸಚಿವ ಕಟ್ಟಾ ಹಾಗೂ ಅವರ ಪುತ್ರ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ 10 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಇಟಾಸ್ಕಾ ಕಂಪನಿಗೆ ಕೆಐಎಡಿಬಿ ಮೂಲಕ 325 ಎಕರೆ ಮಂಜೂರು ಮಾಡಲು 87 ಕೋಟಿ ರುಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಯಾವ ಸಂದರ್ಭದಲ್ಲಾದರೂ ಬಂಧಿಸುವ ಸಾಧ್ಯತೆ ಇದೆ.
ಅತ್ಯಾಚಾರ ಆರೋಪಕ್ಕೆ ಒಳಗಾಗಿದ್ದ ಹರತಾಳು ಹಾಲಪ್ಪ, ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ನಡೆಸಿದ್ದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಮಚಂದ್ರಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಸ್ವತಃ ಮುಖ್ಯಮಂತ್ರಿಗಳ ಮೇಲೆ ಭೂಹಗರಣದ ಗಂಭೀರ ಆರೋಪ ಬಂದರೂ ಯಡಿಯೂರಪ್ಪ ಮಾತ್ರ ಇನ್ನೂ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಮಾಜಿ ಸಚಿವ ಕಟ್ಟಾ ಸದ್ಯ ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications