ಆಂಧ್ರದಲ್ಲಿ ಜಗನ್ ಜೊತೆಗೆ ಬಿಜೆಪಿ ಮೈತ್ರಿ?

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಇನ್ನೊಂದು ಪಕ್ಷ ಅನಿವಾರ್ಯತೆ ಎದುರಾಗಿದೆ. ಇರುವ ಪ್ರತಿಪಕ್ಷಗಳು ಕಾಂಗ್ರೆಸ್ ವಿರುದ್ಧ ಸೆಣಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಗನ್ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಆಂಧ್ರದಲ್ಲಿ ಬಿಜೆಪಿಯ ಅಡಿಪಾಯ ಅಷ್ಟೇನೂ ಗಟ್ಟಿಯಾಗಿಲ್ಲವಾದ್ದರಿಂದ ಜಗನ್ ಮೂಲಕ ಅಡಿಪಾಯ ಹಾಕಿಕೊಳ್ಳಲು ಬಿಜೆಪಿ ಮನಸ್ಸು ಮಾಡಿದೆ. ಮೂಲಗಳ ಪ್ರಕಾರ, ಬಿಜೆಪಿ ರಾಜ್ಯ ಮುಖಂಡರು ಈಗಾಗಲೇ ಜಗನ್ ಜೊತೆಗೆ ಮಾತುಕತೆ ನಡೆಸಿದ್ದಾರೆ
ಕಾಂಗ್ರೆಸ್ ನಲ್ಲಿ ಬಂಡಾಯ ಅಲೆ ಎಬ್ಬಿಸಿರುವ ಅನೇಕ ಶಾಸಕರು, ಸಂಸದರು ಶೀಘ್ರದಲ್ಲಿ ಜಗನ್ ಅವರೊಂದಿಗೆ ಗುರುತಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಜಗನ್ ನೂತನ ಪಕ್ಷ ಸ್ಥಾಪಿಸಲಿದ್ದು, ಅಧಿಕೃತವಾಗಿ ಜಗನ್ ಅವರೇ ಘೋಷಣೆ ಮಾಡಲಿದ್ದಾರೆ ಎಂದು ಜಗನ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಅಂಬಟಿ ರಾಮಬಾಬು ಹೇಳಿದ್ದಾರೆ. ಕಾಂಗ್ರೆಸ್ ಗೆ ಪರ್ಯಾಯವಾಗಿ ಜಗನ್ ಅವರ ನೂತನ ಪಕ್ಷ ಬೆಳೆದು ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದ್ದಿರುವ ಜಗನ್ ಇತ್ತೀಚೆಗೆ ಕಡಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಎಸ್ ರಾಜಶೇಖರರೆಡ್ಡಿ ಅಕಾಲಿಕ ನಿಧನದ ನಂತರ ಜಗನ್ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಸೋನಿಯಾ ಗಾಂಧಿ ಅವರು ಕೆ ರೋಶಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು. ಅಲ್ಲಿಂದ ಶುರುವಾದ ಜಗನ್ ಬಂಡಾಯ ರಾಜೀನಾಮೆ ನೀಡುವ ಮೂಲಕ ಪರ್ಯಾವಸನಗೊಂಡಿತು.











Click it and Unblock the Notifications