ಏರ್ ಲೈನ್ಸ್ ಆರಂಭಿಸಲು ಲಂಚ ಕೇಳಿದ್ರು : ಟಾಟಾ

1995ರಲ್ಲಿ ಏರ್ ಲೈನ್ಸ್ ಕ್ಷೇತ್ರಕ್ಕೆ ಕಾಲಿರಿಸುವ ಉದ್ದೇಶ ಹೊಂದಿದ್ದರೂ ಅಂದಿನ ಕೇಂದ್ರ ಸಚಿವರು 15 ಕೋಟಿ ರೂ. ಲಂಚ ಕೇಳಿದ್ದರಿಂದ ಹಿಂದೆ ಸರಿಯಬೇಕಾಯಿತು ಎಂದು ಬಾಂಬ್ ಎಸೆದಿದ್ದಾರೆ. ಜೆಆರ್‌ಡಿ ಟಾಟಾ 1930ರಲ್ಲಿ ಏರ್‌ಲೈನ್ಸ್ ಆರಂಭಿಸಿದ್ದರು. ಆದರೆ 1950ರಲ್ಲಿ ಇದನ್ನು ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನಾಗಿ ಪರಿವರ್ತಿಸಿತು. ಈ ಕೇಂದ್ರ ಸಚಿವರು ಯಾರು ಎಂದು ಟಾಟಾ ಬಾಯಿ ಬಿಡದಿದ್ದರೂ, ಕರ್ನಾಟಕದ ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿ, ಕೂಡಲೇ ಕೇಂದ್ರ ಸಚಿವರ ಹೆಸರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಡೆಹ್ರಾಡೂನ್‌ನಲ್ಲಿ ಮಾತನಾಡಿದ ರತನ್ ಟಾಟಾ, 1995ರಲ್ಲಿ ಅನುಭವಿಸಿದ ಯಾತನೆಯನ್ನು ವಿವರಿಸಿದ್ದಾರೆ. ಟಾಟಾ ಸಂಸ್ಥೆ 1930ರ ದಶಕದಲ್ಲೇ ಏರ್‌ಲೈನ್ಸ್ ಆರಂಭಿಸಿ ಅದನ್ನು ಸರಕಾರಕ್ಕೆ ಬಿಟ್ಟುಕೊಟ್ಟಿತ್ತು. 1995ರಲ್ಲಿ ಮತ್ತೆ ಏರ್‌ಲೈನ್ಸ್ ಕ್ಷೇತ್ರಕ್ಕೆ ಜಿಗಿಯುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟಾಗ ಕೇಂದ್ರ ಸಚಿವರೊಬ್ಬರು 15 ಕೋಟಿ ರೂ. ಲಂಚ ಕೇಳಿದ್ದರು. ಇದನ್ನು ನೀಡಲು ನಿರಾಕರಿಸಿದಾಗ, ಉದ್ಯಮಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಟಾಟಾ ವಿವರಿಸಿದ್ದಾರೆ.
ಆದರೆ ಲಂಚ ನೀಡುವುದು ಅಸಹ್ಯಕರ ಎಂದು ಭಾವಿಸಿದ್ದರಿಂದ ಹಾಗೂ ತಮ್ಮ ಆತ್ಮಕ್ಕೆ ವಿರುದ್ಧವಾಗಿ ತಪ್ಪು ಹೆಜ್ಜೆ ಇಡಬಾರದೆಂಬ ಉದ್ದೇಶದಿಂದ ಲಂಚ ನೀಡಲಿಲ್ಲ ಎಂದು ಟಾಟಾ ಹೇಳಿದ್ದಾರೆ. ಈ ಸಂಬಂಧ ಮೂವರು ಪ್ರಧಾನ ಮಂತ್ರಿಗಳನ್ನೂ ಭೇಟಿ ಮಾಡಿ ಚರ್ಚಿಸಿದ್ದೆವು. ಆದರೆ ಸರಕಾರದ ಮಟ್ಟದ ಮೂರನೇ ವ್ಯಕ್ತಿಯೊಬ್ಬರ ಅಡ್ಡಗಾಲಿನಿಂದ ಎಲ್ಲ ಪ್ರಯತ್ನ ವ್ಯರ್ಥವಾಯಿತು ಎಂದು ನೆನಪಿನಂಗಳದಿಂದ ಹಲವು ಮಾಹಿತಿ ಬಿಚ್ಚಿಟ್ಟಿದ್ದಾರೆ.












Click it and Unblock the Notifications