ಕೇಸರಿ ಟೆರರಿಸಂ : ಕೇಂದ್ರದ ವಿರುದ್ಧ ಆರ್ಎಸ್ಎಸ್ ಪ್ರತಿಭಟನೆ

ಕೇಂದ್ರದ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೀಡಿರುವ ಪ್ರತಿಭಟನಾ ಕರೆಗೆ ದೇಶದ ಪ್ರತಿ ಜಿಲ್ಲೆಯಲ್ಲೂ ಆರ್ಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹಗ್ ಭಾಗ್ವತ್, ದೇಶದ ಹೆಮ್ಮೆಯ ಸಂಸ್ಥೆ ಎಂದೇ ಹೆಸರುವಾಸಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಭಯೋತ್ಪಾದನೆಯ ಹಣೆಪಟ್ಟಿ ಕಟ್ಟುವ ಮೂಲಕ ರಾಜಕೀಯ ಲಾಭಕ್ಕೆ ಕೇಂದ್ರ ಯತ್ನಿಸುತ್ತಿದೆ. ಇದನ್ನು ದೇಶದ ನಿಷ್ಠಾವಂತ ಹಿಂದೂಗಳು ಎಂದಿಗೂ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.
ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಅಜ್ಮೇರ್ ಸ್ಫೋಟದಲ್ಲಿ ಸಿಲುಕಿಸಲಾಗಿದೆ. ಸಂಘ ಪರಿವಾರದ ಮುಖಕ್ಕೆ ಮಸಿ ಬಳಿಯುವ ಕೆಲಸಕ್ಕೆ ಕೇಂದ್ರ ನಿಂತಿದೆ ಎಂದು ಕಿಡಿಕಾರಿದ ಭಾಗ್ವತ್, ಆರ್ಎಸ್ಎಸ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಸಿಮಿಗೆ ಹೋಲಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರಸ್ಸಿಗರು ಬಾಯಿ ಬಿಗಿಹಿಡಿದು ಮಾತನಾಡಬೇಕು. ಇಲ್ಲದಿದ್ದರೆ, ಹಿಂದೂಗಳ ಆಕ್ರೋಶಕ್ಕೆ ತುತ್ತಾಗುವ ದಿನಗಳ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಗದಗ, ಬಾಗಲಕೋಟಿ, ವಿಜಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರ್ಎಸ್ಎಸ್ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಕೇಂದ್ರ ಸರಕಾರ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿಭಟನೆ ಆರಂಭಿಸಿವೆ.












Click it and Unblock the Notifications