ಎಲ್ಲರನ್ನೂ ಮಂತ್ರಿ ಮಾಡಲು ಅಸಾಧ್ಯ : ಈಶ್ವರಪ್ಪ

ಸಾಂಸ್ಕೃತಿಕ ನಗರಿ ಮೈಸೂರಿನ ರಾಜೇಂದ್ರ ಕಲ್ಯಾಣ ಮಂಟದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ, ಆ ಶಿಸ್ತನ್ನು ಉಳಿಸಲು ಶಾಸಕರು, ಕಾರ್ಯಕರ್ತರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಪಕ್ಷ ಹಾಗೂ ನಾಯಕತ್ವದ ವಿರುದ್ಧ ಬಂಡಾಯವೆದ್ದರೆ ತಕ್ಕ ಪ್ರತಿಫಲ ಉಣ್ಣಬೇಕಾಗುತ್ತದೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಹೀಗಿದ್ದಾಗಲೂ ಕೂಡಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಿ ಎನ್ನುವುದಾದರೆ ನಮ್ಮ ಅಭ್ಯಂತರವಿಲ್ಲ. ಅದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ನಿಮ್ಮ ಗೆಲುವಿಗಾಗಿ ಶ್ರಮಿಸಿದ ಕ್ಷೇತ್ರದ ಕಾರ್ಯಕರ್ತರನ್ನ ನೆನಪಿಸಿಕೊಳ್ಳಿ ಎಂದು ಈಶ್ವರಪ್ಪ ಕಿವಿಮಾತು ಹೇಳಿದರು.
ಸಂಪುಟ ವಿಸ್ತರಣೆ ಶೀಘ್ರ : ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಭಿನ್ನಮತ ಇರುವುದು ವಿಷಯಾಧಾರಿತ ವಿಚಾರದಲ್ಲಿ ಮಾತ್ರ. ಅಧಿಕಾರ ಹೊಂದಬೇಕೆಂಬುದು ಪ್ರತಿಯೊಬ್ಬರ ಆಸೆ. ಆ ಆಸೆ ಈಡೇರದಿದ್ದರೆ ಅಸಮಾಧಾನಗೊಳ್ಳುವುದು ಸಹಜ. ಇದನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡಿ ಶೇ. 70ರಷ್ಟು ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಅನಂತ್, ರೆಡ್ಡಿ ಗೈರು : ಸಂಪುಟ ವಿಸ್ತರಣೆಗೆ ಅನಂತಕುಮಾರ್ ವಿರೋಧ ವ್ಯಕ್ತಪಡಿಸಿದರೆ, ವರ್ತೂರು ಪ್ರಕಾಶ್ ಅವರನ್ನು ಶೀಘ್ರದಲ್ಲೇ ಮಂತ್ರಿ ಮಾಡಬೇಕು ಎಂಬ ರೆಡ್ಡಿಗಳ ಪಟ್ಟಿನ ಬೆನ್ನಲ್ಲೇ ಇಂದು ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಗೆ ಈ ಇಬ್ಬರ ಗೈರು ಹಾಜರಿ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಮುಖಂಡರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ ಹೇಳಿಕೆ ನೀಡುತ್ತಿದ್ದಾರೆ. ಇಂದಿನ ಕಾರ್ಯಕಾರಣಿ ಸಭೆಗೆ ಪಕ್ಷದ ಪ್ರಮುಖರೇ ಗೈರು ಹಾಜರಾಗಿದ್ದು ಮತ್ತೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮಧ್ಯೆ ಅತೃಪ್ತ 8 ಶಾಸಕರು ಹಾಗೂ ರೆಡ್ಡಿಗಳನ್ನು ಮನವೊಲಿಸಲು ಕಾರ್ಯದಲ್ಲಿ ಯಡಿಯೂರಪ್ಪ ಮಗ್ನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications