ಬಿಹಾರ : ಎರಡನೇ ಹಂತದಲ್ಲಿ ಶೇ. 53 ಮತದಾನ

ಅಲ್ಲೊಂದು ಇಲ್ಲೊಂದು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತ ವಾಗಿತ್ತು. 98.44 ಲಕ್ಷ ಜನರು 45 ವಿಧಾನಸಭೆ ಕ್ಷೇತ್ರಗಳಲ್ಲಿ ಭಾನುವಾರ ಮತದಾನ ಮಾಡಿದ್ದಾರೆ. ಮತದಾನಕ್ಕೆ ಎರಡುದಿನಗಳ ಹಿಂದೆ ಶಿವಹರ್ ಜಿಲ್ಲೆಯಲ್ಲಿ ಮಾವೊ ಉಗ್ರರು ನೆಲಬಾಂಬ್ ಸ್ಫೋಟಿಸಿ, ಆರು ಪೊಲೀಸರನ್ನು ಬಲಿ ತೆಗೆದು ಕೊಂಡಿದ್ದರು. ಈ ಕರಿನೆರಳಿನ ಮಧ್ಯೆಯೇ ಮತದಾನ ನಡೆದಿದ್ದು, ಶಿವಹರ್ ಮತ್ತು ಬೆಲ್ ಸಂದ್ ಕ್ಷೇತ್ರಗಳಲ್ಲಿ ಮತ ದಾನದ ಅವಧಿಯನ್ನು ಎರಡು ಗಂಟೆ ಕಡಿಮೆ ಮಾಡಲಾಗಿತ್ತು.
ಗಲಭೆಪೀಡಿತ ಪಾರೋ, ಮಿನಾಪುರ್ ಮತ್ತು ಸಾಹೇಬ್‌ಗಂಜ್‌ನಲ್ಲಿ ಮತದಾನ ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಗೊಂಡಿತು. ಮತದಾನ ಬಹಿಷ್ಕರಿಸುವಂತೆ ಕರೆ ನೀಡಲಾಗಿದ್ದ ಕ್ಷೇತ್ರಗಳಲ್ಲಿಯೇ ಹೆಚ್ಚಿನ ಮತದಾನ ನಡೆದಿದೆ. ಪಾರೋ ನಲ್ಲಿ ಶೇ.62, ಮಿನಾಪುರದಲ್ಲಿ ಶೇ.53.79 ಮತ್ತು ಶಿವಹರ್‌ನಲ್ಲಿ ಶೇ.49ರಷ್ಟು ಮತದಾನವಾಗಿದೆ.
ವ್ಯಾಪಕ ಭದ್ರತೆ : ಮತದಾನ ಬಹಿಷ್ಕರಿಸುವಂತೆ ಮಾವೊ ಉಗ್ರರು ಪೋಸ್ಟರ್‌ಗಳನ್ನು ಸರಕಾರಿ ಕಟ್ಟಡ ಮತ್ತು ಮತದಾನ ಕೇಂದ್ರಗಳ ಗೋಡೆಗಳಿಗೆ ಅಂಟಿಸಿದ್ದರು. ಕಾನೂನು ವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ 118 ಮಂದಿಯನ್ನು ಬಂಧಿಸಲಾಗಿತ್ತು. ನೇಪಾಳಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ವೈಮಾನಿಕ ಕಣ್ಗಾವಲು ಇಡಲಾಗಿತ್ತು ಎಂದು ಪೊಲೀಸ್ ಪ್ರಧಾನ ನಿರ್ದೇಶಕ ನೀಲಮಣಿ ತಿಳಿಸಿದ್ದಾರೆ.












Click it and Unblock the Notifications