ಕವಿವಿ : ರಾಜ್ಯಪಾಲರ, ಸರಕಾರದ ಮಧ್ಯೆ ಸಂಘರ್ಷ

ಕುಲಪತಿ ಹುದ್ದೆಗೆ ಸರಕಾರ ಶಿಫಾರಸು ಮಾಡಿದ್ದವರನ್ನು ಬಿಟ್ಟು, ರಾಜ್ಯಪಾಲರು ಮತ್ತೊಬ್ಬರನ್ನು ನೇಮಿಸಿ ಅಧಿಸೂಚನೆ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಶಿಫಾರಸು ಮಾಡಿ ಹಿನ್ನಡೆ ಅನುಭವಿಸಿದ್ದ ರಾಜ್ಯಪಾಲ ಹನ್ಸ್‌ರಾಜ್ ಭಾರದ್ವಾಜ್, ಈಗ ವಿವಿ ಕುಲಪತಿ ನೇಮಕ ವಿಚಾರದಲ್ಲಿ ಸರಕಾರದ ಶಿಫಾರಸು ಕಡೆಗಣಿಸಿ ಸೇಡು ತೀರಿಸಿಕೊಂಡಿದ್ದಾರೆ.
ಕುಲಪತಿ ಪ್ರೊ.ಎಸ್.ಕೆ.ಸೈದಾಪುರ್ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ನೂತನ ಕುಲಪತಿಯಾಗಿ ಡಾ. ಎಚ್.ಬಿ. ವಾಲೀಕಾರ್ ಅವರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಆದರೆ, ಸರಕಾರವು ವಿವಿಯ ಹಾಲಿ ಕುಲಸಚಿವ ಪ್ರೊ. ಎಸ್.ಬಿ. ಹಿಂಚಗೇರಿ ಹೆಸರನ್ನು ಸೂಚಿಸಿತ್ತು. ಈ ವಿಷಯ ತಿಳಿಯುತ್ತಲೇ ಉನ್ನತ ಶಿಕ್ಷಣ ಸಚಿವ ಆಚಾರ್ಯ ಅವರು ರಾಜಭವನಕ್ಕೆ ಮಂಗಳವಾರ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ, ವಾಲೀಕಾರ್ ನೇಮಕ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರ ಏಕಪಕ್ಷೀಯ ಕ್ರಮ ಖಂಡಿಸಿ ಪತ್ರವನ್ನೂ ಬರೆದಿದ್ದಾರೆ.
ಪತ್ರದಲ್ಲೇನಿದೆ? : ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಕೃಷ್ಣರಾವ್ ಅವರಿಗೆ ಬರೆದಿರುವ ಪತ್ರದಲ್ಲಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ ಸೆಕ್ಷನ್ 14(4)ರ ಪ್ರಕಾರ ಕುಲಪತಿ ಆಯ್ಕೆ ಸಮಿತಿಯು ಅಂತಿಮಗೊಳಿಸಿದ್ದ ಮೂವರು ಅಭ್ಯರ್ಥಿಗಳಲ್ಲಿ ಅರ್ಹರಾದ ಒಬ್ಬರನ್ನು ರಾಜ್ಯಪಾಲರು ಆಯ್ಕೆ ಮಾಡಬೇಕು. ಸರಕಾರದ ಒಪ್ಪಿಗೆ ಪಡೆದು ಕುಲಪತಿ ಹುದ್ದೆಗೆ ನೇಮಿಸಬೇಕು. ಆದರೆ, ಸರಕಾರ ಮಾಡಿದ ಶಿಫಾರಸಿಗೆ ವಿರುದ್ಧವಾಗಿ ರಾಜ್ಯಪಾಲರು ವಾಲೀಕಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಆಯ್ಕೆ ಸಮಿತಿ ಶಿಫಾರಸೇನು : ಸರಕಾರ ರಚಿಸಿದ್ದ ಆಯ್ಕೆ ಸಮಿತಿಯು, ಡಾ. ಎಚ್.ಬಿ.ವಾಲೀಕಾರ್, ಪ್ರೊ.ಹಿಂಚಗೇರಿ ಹಾಗೂ ಪ್ರೊ.ತಿಮ್ಮೇಗೌಡ ಅವರ ಹೆಸರು ಅಂತಿಮಗೊಳಿಸಿ ಸರಕಾರಕ್ಕೆ ಪಟ್ಟಿ ಸಲ್ಲಿಸಿತ್ತು. ಈ ಮೂವರಲ್ಲಿ ಹಿಂಚಗೇರಿ ನೇಮಕಕ್ಕೆ ಸರಕಾರ ಒಲವು ತೋರಿಸಿತ್ತು. ಹಿಂಚಗೇರಿ ಹಾಲಿ ಕುಲಸಚಿವರಾಗಿದ್ದರೆ, ವಾಲೀಕಾರ್ ಅವರು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರೊ.ತಿಮ್ಮೇಗೌಡರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.












Click it and Unblock the Notifications