ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ವಿಜಯ : ಯಡಿಯೂರಪ್ಪ

By Prasad
|
Google Oneindia Kannada News

Chief Minister BS Yeddyurappa
ಬೆಂಗಳೂರು, ಅ. 14 : ಮೂರು ದಿನಗಳಲ್ಲಿ ಎರಡನೇ ಬಾರಿಗೆ ವಿಶ್ವಾಸಮತದಲ್ಲಿ ಗೆದ್ದಿರುವ ಖುಷಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದಿನ ಜಯ ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ವಿಜಯ ಎಂದು ಬಣ್ಣಿಸಿದ್ದಾರೆ.

ವಿಶ್ವಾಸಮತದಲ್ಲಿ ಜಯಗಳಿಸಿದ ನಂತರ ವಿಧಾನಸೌಧದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಯಶಸ್ಸಿಗಾಗಿ ಸಹಕರಿಸಿದ ಎಲ್ಲ ಶಾಸಕರಿಗೆ ಕೃತಜ್ಞತೆ ಅರ್ಪಿಸಿದರು. ಅ. 11ನೇ ತಾರೀಖಿನಂದು ನಡೆದ ವಿದ್ಯಮಾನವನ್ನು ಅತ್ಯಂತ ಕರಾಳ ಘಟನೆಯೆಂದು ರಾಜ್ಯದ ಜನತೆ ಮರೆತುಬಿಡಬೇಕೆಂದು ಮನವಿ ಮಾಡಿಕೊಂಡರು. ಮತ್ತು ನಾಡಿನ ಪ್ರತಿಷ್ಠೆ ಪ್ರತಿಷ್ಠಾಪಿಸುವುದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಕೋರಿದರು.

ರಾಜ್ಯಪಾಲರು ಹಂಸರಾಜ್ ಭಾರದ್ವಾಜ್ ಅವರ ಸೂಚನೆಯಂತೆ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದ್ದೇವೆ. ಮತ್ತೆ ಬಹುಮತ ಸಾಬೀತುಪಡಿಸಬೇಕೆಂದು ಕೇಳಿದಾಗ, ಸಾಂವಿಧಾನಕ ಬಿಕ್ಕಟ್ಟು ಉದ್ಭವಿಸಬಾರದೆಂಬ ಕಾರಣದಿಂದ ಪಕ್ಷದ ಹಿರಿಯ ನಾಯಕರ ಅಣತಿಯಂತೆ ಬಹುಮತ ಸಾಬೀತುಪಡಿಸಲು ಒಪ್ಪಿ ಗೆದ್ದಿದ್ದೇವೆ ಎಂದು ಹೇಳಿದರು.

ಇನ್ನು ಮುಂದೆ ಕರ್ನಾಟಕದ ಅಭಿವೃದ್ಧಿಯೇ ಪಕ್ಷದ ಏಕೈಕ ಮಂತ್ರವಾಗಲಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಸಹಕರಿಸಿದರೆ ಮಾತ್ರ ಅಭಿವೃದ್ಧಿಯ ಚಕ್ರ ಮುಂದೆ ಸಾಗಲು ಸಾಧ್ಯ. ಚುನಾವಣೆಯಲ್ಲಿ ಮಾತ್ರ ನಾವು ಪ್ರತಿಸ್ಪರ್ಧಿಗಳು. ರಾಜ್ಯದ ಅಭಿವೃದ್ಧಿಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಕೈಜೋಡಿಸಬೇಕು ಎಂದು ಕೋರಿಕೊಂಡರು.

ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ರಾಜಕೀಯ ತಾಕಲಾಟಗಳನ್ನು ಧರ್ಮ ಮತ್ತು ಅಧರ್ಮದ ಯುದ್ಧ ಎಂದು ಬಣ್ಣಿಸಿದ್ದರು. ಯಾವುದು ಧರ್ಮ, ಯಾವುದು ಅಧರ್ಮ ಎಂಬುದನ್ನು ಜನತೆಯೇ ನಿರ್ಧರಿಸಲಿದ್ದಾರೆ. ನಾವು ಶಾಶ್ವತವಲ್ಲ, ನಾವು ಮಾಡುವ ಕೆಲಸ ಮಾತ್ರ ಶಾಶ್ವತ. ಅವರ ರಾಜಕೀಯ ನಡೆಗಳಿಂದ ಜನತೆಯೆಲ್ಲ ರಾಜಕಾರಣಿಗಳನ್ನು ಸಂಶಯದಿಂದ ನೋಡುವಂತೆ ಮಾಡಿದ್ದಾರೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಸರಕಾರ ಬೀಳಿಸಲು ವಿರೋಧಿ ಪಕ್ಷಗಳಿಂದ ಸಾಕಷ್ಟು ಲಾಬಿ ನಡೆಸಲಾಗಿತ್ತು. ಇಂದು ನಮಗೆ ದಕ್ಕಿದ ಜಯ ಲಾಬಿಗೆ ಆದ ಸೋಲು. ನಾವು ಯಾವುದೇ ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಖಾರವಾಗಿ ನುಡಿದರು.

ಎಲ್ಲ ರಾಜಕೀಯ ದುಗುಡಗಳಿಂದ ಸ್ವತಂತ್ರರಾಗಿರುವಂತೆ ಕಂಡುಬಂದ ಯಡಿಯೂರಪ್ಪ ಅವರು, ರಾಜಕೀಯ ಚಟುವಟಿಕೆಗಳಿಂದ ಬಿಡುಗಡೆ ಮಾಡಿಕೊಂಡು ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಭಾಗವಹಿಸಲು ಮೈಸೂರಿಗೆ ತೆರಳುವುದಾಗಿ ಹೇಳಿದರು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X