ನಾಳೆ 20 ಶಾಸಕರ ರಾಜೀನಾಮೆ : ಬೇಳೂರು

ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ ಬೇಳೂರು ಗೋಪಾಲಕೃಷ್ಣ, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು 'ಪಕ್ಷ ಬಿಟ್ಟರೆ ಬಿಟ್ಟು ಹೋಗು' ಎಂದು ಹೇಳಿ ಈಡಿಗ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರು ಹಿರಿಯರಾಗಿದ್ದರೂ ಏಕವಚನದಲ್ಲಿ ಮಾತನಾಡಬಾರದಿತ್ತು. ಹೋದರೆ ಹೋಗು ಎಂಬ ಅವರ ಮಾತಿಗೆ ಬದ್ಧರಾಗಿ 20 ಶಾಸಕರು ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ.
ಈಶ್ವರಪ್ಪ ಹೇಳಿದ್ದೇನು? : ಈಶ್ವರಪ್ಪನವರು ಎರಡು ದಿನಗಳ ಹಿಂದೆ ಭಿನ್ನಮತದ ಭೂತಕ್ಕೆ ಮತ್ತೆ ಜೀವ ನೀಡಿದ್ದ ಬೇಳೂರು ಗೋಪಾಲಕೃಷ್ಣ ಅವರನ್ನುದ್ದೇಶಿಸಿ, 'ಪಕ್ಷದ ಶಿಸ್ತಿಗೆ ಬಗ್ಗಿ ನಡೆದರೆ ಇರು, ಇಲ್ಲದಿದ್ದರೆ ಪಕ್ಷ ಬಿಟ್ಟು ಹೋಗು' ಎಂದು ಏಕವಚನದಲ್ಲಿ ಖಾರವಾಗಿ ನುಡಿದಿದ್ದರು.
ಸಂಪುಟದಲ್ಲಿ ಸ್ಥಾನಕ್ಕಾಗಿ ಭಾರೀ ಕಸರತ್ತು ನಡೆಸುತ್ತಿರುವ ಬೇಳೂರು ಗೋಪಾಲಕೃಷ್ಣ ಈಶ್ವರಪ್ಪ ಹೇಳಿಕೆಯಿಂದ ಸಿಡಿದೆದ್ದಿದ್ದು, ಈಶ್ವರಪ್ಪ ಹೀಗೆ ಹೇಳಿಕೆ ನೀಡಿ ಇಡೀ ಈಡಿಗ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಸಂಪುಟದಲ್ಲಿ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯಕ್ಕೆ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಆದರೆ, ಈಡಿಗರನ್ನು ಕಡೆಗಣಿಸಲಾಗಿದೆ ಎಂದು ಕೆಂಡ ಕಾರಿದ್ದಾರೆ. ರೇಣುಕಾಚಾರ್ಯ ಅವರು ಅಮೆರಿಕ ಪ್ರವಾಸದಿಂದ ವಾಪಸ್ ಬರುತ್ತಿದ್ದು, ಈಗ ದುಬೈನಲ್ಲಿದ್ದಾರೆ. ಅವರು ಬೆಂಗಳೂರಿಗೆ ಬಂದ ನಂತರ ನಾಳೆ ರಾಜ್ಯಪಾಲರಿಗೆ ಅವರ ನೇತೃತ್ವದಲ್ಲಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಬಿಜೆಪಿ ಭಾರೀ ಕಗ್ಗಂಟಾಗಿ ಪರಿಣಮಿಸಿದೆ. ಒಂದೆಡೆ ಸಂಸದ ಅನಂತಕುಮಾರ್ ಅಡ್ಡಗಾಲು ಹಾಕುತ್ತಿದ್ದರೆ, ಇನ್ನೊಂದೆಡೆ ಶಾಸಕರನೇಕರು 'ಬ್ಲಾಕ್ ಮೇಲ್' ತಂತ್ರಕ್ಕೆ ಮೊರೆಹೋಗಿದ್ದಾರೆ. ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಸಚಿವ ಸ್ಥಾನ ಕಸಿದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯಕ್ಕೆ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಬೆಳ್ಳುಬ್ಬಿ, ನಾರಾಯಣಸ್ವಾಮಿ, ಸಿಟಿ ರವಿ ಮುಂತಾದವರು ಸಂಪುಟ ಸೇರುವ ಸಾಧ್ಯತೆಯಿದೆ ಎಂಬ ಮಾತು ವಿಧಾನಸೌಧ ಅಂಗಳದಲ್ಲಿ ಗಾಳಿಯಲ್ಲಿ ಹಾರಾಡುತ್ತಿದೆ.
ಮುಖ್ಯಮಂತ್ರಿ ಪ್ರತಿಕ್ರಿಯೆ : ರಾಜೀನಾಮೆ ಬೆದರಿಕೆಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಈ ಬಗ್ಗೆ ನನಗೆ ಅಷ್ಟೇನು ಗೊತ್ತಿಲ್ಲ. ಆದರೆ, ಯಾವ ಶಾಸಕರನ್ನೂ ಪಕ್ಷ ಬಿಟ್ಟು ಹೋಗಲು ಬಿಡುವುದಿಲ್ಲ ಎಂದಿದ್ದಾರೆ. ಈಶ್ವರಪ್ಪನವರು ಕೂಡ, ಬೇಸರವಾದಾಗ ಈ ರೀತಿ ಹೇಳುವುದು ಸಹಜ. ಪಕ್ಷದ ಚೌಕಟ್ಟಿನಲ್ಲಿ ಈ ಬಗ್ಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ನುಡಿದಿದ್ದಾರೆ.












Click it and Unblock the Notifications