ರೆಡ್ಡಿಗಳ ಬೆಂಬಲಕ್ಕೆ ನಿಂತ ಯಡಿಯೂರಪ್ಪ

ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿಲ್ಲ. ಅವರ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಹೀಗಿರುವಾಗ ರೆಡ್ಡಿಗಳ ಮೇಲೆ ಕ್ರಮ ಕೈಗೊಳ್ಳುವುದು ಹೇಗೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳು ವಿನಾಕಾರಣ ಪ್ರತಿಭಟನೆ ನಡೆಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿವೆ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ. ಅಲ್ಲಿಗೆ ಸಾಕ್ಷ್ಯಾಧಾರಗಳನ್ನು ಒದಗಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ. ಅದನ್ನು ಬಿಟ್ಟು ಪ್ರತಿಭಟನೆ ಮಾಡುವುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ವಿನಾಕರಣ ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿಗಳ ಹೆಸರು ಪ್ರಸ್ತಾಪಿಸಿ ಗೊಂದಲ ಸೃಷ್ಟಿಸಿವೆ. ಗೂಬೆ ಕೂರಿಸುವ ಕೆಲಸದಲ್ಲಿ ನಿರತರಾಗಿರುವ ವಿಪಕ್ಷಗಳ ತಂತ್ರಗಾರಿಕೆ ಫಲಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು. 2002 ರಿಂದ ಈವರೆಗೆ ನಡೆದಿರುವ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುವಂತೆ ನಾಳೆಯೇ ಲೋಕಾಯುಕ್ತರಿಗೆ ಪತ್ರ ಬರೆಯುವುದಾಗಿ ಘೋಷಿಸಿದ ಅವರು, ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡು ಬರುವ ವ್ಯಕ್ತಿಗಳು ಎಷ್ಟೇ ಪ್ರಭಾವಿಯಾದರೂ ಶಿಕ್ಷಿಸದೇ ಬಿಡುವುದಿಲ್ಲ ಎಂದರು.
ಈಗಾಗಲೇ ಸರಕಾರ ಉಪಲೋಕಾಯುಕ್ತ ಸ್ಥಾನಕ್ಕೆ ಎ ಬಿ ಮಜಿಗೆ ಅವರನ್ನು ನೇಮಿಸಿದೆ. ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅನಂತರ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖೆಗೆ ಮತ್ತಷ್ಟು ವೇಳೆ ಸಿಗಲಿದ್ದು, ಯಾರ ಬಣ್ಣ ಏನು ಎನ್ನುವುದು ಬಯಲಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಜನ್ಮ ಜಾಲಾಡುವೆ : ಜನಾರ್ದನರೆಡ್ಡಿ
ಪ್ರತಿಪಕ್ಷಗಳು ನಮ್ಮ ಮೇಲೆ ಏಕೆ ದ್ವೇಷ ಸಾಧಿಸುತ್ತವೆ ಎಂದು ನಮಗೆ ತಿಳಿಯುತ್ತಿಲ್ಲ. ಇಂತಹ ಬೆದರಿಕೆ ನಾವು ಬಗ್ಗುವವರಲ್ಲ. ಯಾವುದೇ ಸವಾಲು ಸ್ವೀಕರಿಸುವುದು ನಮಗೆ ಮೊದಲನಿಂದಲೂ ರೂಢಿಯಾಗಿದೆ. ತಮ್ಮ ಮೇಲಿರುವ ಆರೋಪಗಳಿಗೆ ಯಾವುದೇ ತನಿಖೆಗೆ ಸಿದ್ಧ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಗೆ ಆಗಮಿಸಿದ ಅವರು, ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡೆಸಿದ ಅಕ್ರಮ ಗಣಿಗಾರಿಕೆಯನ್ನು ಬಯಲು ಮಾಡುವುದಾಗಿ ರೆಡ್ಡಿ ಹೇಳಿದ್ದಾರೆ. ಈ ಬಗ್ಗೆ ಕೂಡಲೇ ಪತ್ರಿಕಾಗೋಷ್ಠಿಯನ್ನು ಕರೆಯುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications