ಗಣಿಧಣಿಗಳ ಹಿಡಿತದಲ್ಲಿ ಸರಕಾರ : ಕಾಗೋಡು

ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು, ಗಣಿಧಣಿಗಳ ಹಿಡಿತಕ್ಕೆ ಸಿಕ್ಕಿ ನಲುಗಿ ಹೋಗಿದೆ. ಗಣಿಧಣಿಗಳು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗಣಿಧಣಿಗಳ ಹಿಡಿತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದರೂ ಯಾವುದೇ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗಾಗಿಯೇ ಬಳ್ಳಾರಿಯ ಗಣಿಧಣಿಗಳು ವಿಧಾನಸಭೆಯಲ್ಲೂ ಗುಂಡಾಗಿರಿ ಪ್ರವೃತ್ತಿಯನ್ನು ತೋರಿಸುತ್ತಿದ್ದು, ಇಷ್ಟೆಲ್ಲ ಶಕ್ತಿ ಬರಲು ಗಣಿ ಕಾಂಚಾಣ ಕುಣಿಯುತ್ತಿರುವುದೇ ಕಾರಣವಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯ ರಾಜ್ಯಾಧ್ಯಕ್ಷ ರಾಗಿರುವ ಕೆ.ಎಸ್.ಈಶ್ವರಪ್ಪರವರಿಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲ. ಮಾತನಾಡಲು ಹೊರಟರೆ ಮನಸ್ಸಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ ಎಂದು ಟೀಕಿಸಿದರಲ್ಲದೆ, ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ಹಿಂದೆಂದೂ ಕಾಣದಂತಹ ಭ್ರಷ್ಟ ಸರ್ಕಾರವನ್ನು ಬೀಳಿಸುವವರೆಗೂ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದು, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಬಿಜೆಪಿ ತೊಡಗಿದೆ. ಕೇವಲ ಪೊಳ್ಳು ಭರವಸೆಯನ್ನು ನೀಡುತ್ತಾ, ರಾಜ್ಯವನ್ನು ಲೂಟಿ ಹೊಡೆಯಲು ಮುಂದಾಗಿದೆ. ಬಡವರಿಗೆ, ರೈತರಿಗೆ ಯಾವುದೇ ರೀತಿಯ ಸೌಲಭ್ಯವನ್ನು ನೀಡದೇ ಕೇವಲ ತಮ್ಮ ಅಭಿವೃದ್ಧಿಯಲ್ಲಿಯೇ ತೊಡಗಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಮೀರ್‌ಅಜೀಜ್‌ಅಹಮ್ಮದ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ನಗರಸಭಾ ಸದಸ್ಯರಾದ ಮರಿಯಪ್ಪ, ಕಾಶೀವಿಶ್ವನಾಥ್, ಯೋಗೇಶ್, ವಿಜಯಲಕ್ಷ್ಮಿಪಾಟೀಲ್, ಶಾಮಿಮ್‌ಬಾನು, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರವೀಣ್‌ಪಟೇಲ್, ನಗರಾಧ್ಯಕ್ಷ ರಂಗನಾಥ್, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ದೇವೇಂದ್ರಪ್ಪ, ರಮೇಶ್ ಹೆಗ್ಡೆ, ರಾಮೇಗೌಡ, ಪ್ರವೀಣ್‌ಕುಮಾರ್ ಎನ್.ಡಿ. ಸೇರಿದಂತೆ ಹಲವು ಮುಖಂಡರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.











Click it and Unblock the Notifications