Get Updates
Get notified of breaking news, exclusive insights, and must-see stories!

'ಲೋಕಾಯುಕ್ತರಿಗೆ ಸರಕಾರ ಕಪಾಳಮೋಕ್ಷ ಮಾಡಿದೆ'

Lokayukta Justice Santosh Hegde resigns
ಬೆಂಗಳೂರು, ಜೂ. 23 : ತೊಂಬತ್ತೆಂಟು ದಾಳಿಗಳನ್ನು ನಡೆಸಿ 316 ಕೋಟಿ ರು.ಗಳನ್ನು ವಶಪಡಿಸಿಕೊಂಡು ರಾಜ್ಯದ ಭ್ರಷ್ಟಾತಿಭ್ರಷ್ಟ ಅಧಿಕಾರಿಗಳಿಗೆ, ಸಚಿವರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಅವಧಿ ಮುಗಿಯುವ 14 ತಿಂಗಳ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಇಂದು ಸಂಜೆ ರಾಜಭವನಕ್ಕೆ ತೆರಳಿದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ನಾಲ್ಕು ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ರಾಜೀನಾಮೆಯೊಂದಿಗೆ ಭ್ರಷ್ಟರ ವಿರುದ್ಧ ಯುದ್ಧ ಸಾರಿದ್ದು, ಕೋಟಿ ಕೋಟಿ ಆಸ್ತಿಪಾಸ್ತಿ ವಶಪಡಿಸಿಕೊಂಡಿದ್ದು, ನೂರಾರು ತನಿಖೆ ನಡೆಸಿದ್ದು, ವರದಿ ಸಲ್ಲಿಸಿದ್ದು, ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಿಸಿದ್ದು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ತೀರಾ ನೊಂದಿದ್ದೇನೆ : "ನಾನು ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ನನ್ನ ಉಪಸ್ಥಿತಿಯಿಂದ ಭ್ರಷ್ಟಾಚಾರ ನಿಗ್ರಹವಾಗುತ್ತಿಲ್ಲ. ನಾನಿಲ್ಲಿರುವುದೇ ನಿರುಪಯುಕ್ತ. ನನ್ನಿಂದ ರಾಜ್ಯದ ಜನತೆಗೆ ಯಾವುದೇ ಸಹಾಯವಾಗುತ್ತಿಲ್ಲ. ನಾನು ಅಸಹಾಯಕ. ನನ್ನಡಿಯಲ್ಲಿ ಕೆಲಸ ಮಾಡುತ್ತಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಕಾಪಾಡಲು ಆಗುತ್ತಿಲ್ಲ. ಆರೋಪ ಸಾಬೀತಾಗಿರುವ ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಲೂ ಆಗುತ್ತಿಲ್ಲ. ಅಸಲಿಗೆ ಈ ಕುರ್ಚಿಯಲ್ಲಿ ಕೂಡಲೇ ಆಗುತ್ತಿಲ್ಲ. ನಿರುಪಯುಕ್ತ ಕುರ್ಚಿಯಲ್ಲಿ ಯಾಕಾದರೂ ಇರಬೇಕು" ಎಂದು ಮನದಾಳದ ಮಾತುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

ಬೇರೆ ಬೇರೆ ಕಾರಣಗಳಿಂದ, ಬೇರೆ ಬೇರೆ ಹಂತದಲ್ಲಿ, ಸರಕಾರ ಲೋಕಾಯುಕ್ತರನ್ನು ಕಡೆಗಣಿಸುತ್ತಲೇ ಬಂದಿದೆ. ಮುಖ್ಯಮಂತ್ರಿಗಳನ್ನು ಒಂದೇ ಬಾರಿ ಭೇಟಿ ಮಾಡಿದಾಗ ಮೂರು ಬೇಡಿಕೆಗಳಿಗೆ ವಾಗ್ದಾನವಿತ್ತಿದ್ದರು. ಯಾವುದನ್ನೂ ಪೂರೈಸಿಲ್ಲ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲೇ ಇಲ್ಲ. ಅಮಾನತಾದ ಬಿಬಿಎಂಪಿ ಅಧಿಕಾರಿಯನ್ನು ಮತ್ತೆ ಅದೇ ಹುದ್ದೆಗೆ ನೇಮಿಸಿ ಲೋಕಾಯುಕ್ತರಿಗೆ ಸರಕಾರ ಕಪಾಳಮೋಕ್ಷ ಮಾಡಿದೆ ಎಂದು ಸಂತೋಷ್ ಹೆಗ್ಡೆ ಅಲವತ್ತುಕೊಂಡರು.

ಲೋಕಾಯುಕ್ತ ಇಲಾಖೆ ಬರೀ ಅರ್ಧ ಮಾತ್ರ ಕೆಲಸ ಮಾಡುತ್ತಿದೆ. ಕಳೆದ ಆರು ತಿಂಗಳಿಂದ, ದಾಳಿ ನಡೆಸಲು ಅಧಿಕಾರವಿರುವ ಉಪಲೋಕಾಯುಕ್ತರನ್ನು ನೇಮಿಸಲು ಸಾಧ್ಯವಾಗಿಲ್ಲ. 9 ಸಾವಿರ ಪ್ರಕರಣಗಳು ಉಪಲೋಕಾಯುಕ್ತರ ಮುಂದಿವೆ. ಅವುಗಳಲ್ಲಿ 3 ಸಾವಿರ ಪ್ರಕರಣಗಳು ವಿಲೇವಾರಿಗೆ ಸಿದ್ಧವಾಗಿವೆ. ಭ್ರಷ್ಟರು ಆರಾಮವಾಗಿ ತಿರುಗಾಡುತ್ತಿದ್ದಾರೆ ಎಂದು ಸರಕಾರದ ನಿರ್ಲಕ್ಷ್ಯತನವನ್ನು ಹೆಗ್ಡೆ ಖಂಡಿಸಿದರು.

ಅಸಹಾಯಕ : ಕಾರವಾರ ಜಿಲ್ಲೆಯಲ್ಲಿ 99 ಲಾರಿಗಳಲ್ಲಿದ್ದ 40 ಚೀಲಗಳಲ್ಲಿದ್ದ ಖೊಟ್ಟಿ ದಾಖಲೆಗಳನ್ನು, ಎರಡೂವರೆ ಸಾವಿರ ಕೋಟಿ ರು. ಬೆಲೆಯ 50 ಲಕ್ಷ ಟನ್ ಅಕ್ರಮ ಕಬ್ಬಿಣದ ಅದಿರನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾಗಿದ್ದರಿಂದ ಎಲ್ಲ ನಾಪತ್ತೆಯಾಗಿವೆ. ಭ್ರಷ್ಟರನ್ನು ಹಿಡಿಯಲು ಕಾರಣರಾದ ಅಧಿಕಾರಿಯನ್ನೇ ಅಮಾನತು ಮಾಡಲಾಯಿತು. ಅವರಿಗೆ ನಾನು ಯಾವುದೇ ಸಹಾಯ ಮಾಡಲಾಗಲಿಲ್ಲ ಎಂದು ಅವರು ಲೋಕಾಯುಕ್ತರಾಗಿ ತಮಗಿರುವ ಅಸಹಾಯಕತೆಯನ್ನು ತೋಡಿಕೊಂಡರು.

ರಾಜೀನಾಮೆ ಸಲ್ಲಿಸಿದ್ದೇನೆ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ರಾಜೀನಾಮೆಯನ್ನು ಹಿಂದೆಪಡೆಯುವುದಿಲ್ಲ. ಆದರೆ, ಗೋಡೆ ಕುಸಿತದಿಂದ ಮೃತಳಾದ ಸಂಜನಾ ಸಿಂಗ್ ಪ್ರಕರಣ ಸೇರಿದಂತೆ ಪೂರೈಸದ ಕೆಲ ಕೆಲಸಗಳು ಇರುವುದರಿಂದ ಆಗಸ್ಟ್ 31ರವರೆಗೆ ನನ್ನ ಸ್ಥಾನದಲ್ಲಿ ಮುಂದುವರಿಯುತ್ತೇನೆ. ಅಲ್ಲಿಯವರೆಗೆ ಯಾವುದೇ ಸರಕಾರಿ ಸೌಲಭ್ಯಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.

ಸರಕಾರಕ್ಕೆ ಆತ್ಮಸಾಕ್ಷಿಯಿದ್ದರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಸಾಧ್ಯವಾದರೆ ತನ್ನನ್ನು ತಾನು ತಿದ್ದಿಕೊಳ್ಳಲಿ. ಇದರಿಂದ ಮುಂದಿನ ಲೋಕಾಯುಕ್ತರಿಗೆ ಸಹಾಯವಾಗಲಿ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಸರಕಾರ ನೇಮಿಸಲಿ ಎಂದು ಸಂತೋಷ್ ನುಡಿದರು.

ಖಾಸಗಿ ವಾಹಿನಿ ವಿರುದ್ಧ ಕೆಂಡ : ನ್ಯಾಯಾಂಗ ನಿಂದನೆಗೆ ಹೆದರಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ವರದಿ ಬಿತ್ತರಿಸಿದ ಖಾಸಗಿ ವಾಹಿನಿಯ ವಿರುದ್ಧ ಸಂತೋಷ್ ಹೆಗ್ಡೆ ಹರಿಹಾಯ್ದರು. ಕೇವಲ ಮೂರು ದಿನಗಳ ಹಿಂದೆ ಪ್ರಾರಂಭವಾದ ಆ ವಾಹಿನಿಗೆ ನಾಚಿಕೆಯಾಗಬೇಕು. ನನ್ನ ವಿರುದ್ಧ ಯಾವುದೇ ನ್ಯಾಯಾಂಗ ನಿಂದನೆಯಿಲ್ಲ. ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆಗಳನ್ನು ಹೂಡಲಾಗಿದೆ. ನಾನು ಯಾವುದೇ ಮೊಕದ್ದಮೆಗಳಿಗೆ ಹೆದರುವುದಿಲ್ಲ. ನಾನವುಗಳನ್ನು ಎದುರಿಸುತ್ತೇನೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+