ಹಣ ಹೊಡೆಯಲು ಸಮಾವೇಶ : ಸಿದ್ದು ವ್ಯಂಗ್ಯ

ಹೊಸಪೇಟೆಯ ಅನಂತಶಯನಗುಡಿ ಸಮೀಪ ಯಲ್ಲಾಲಿಂಗೇಶ್ವರ ಸಿದ್ದರಾಮೇಶ್ವರ ಸ್ವಾಮಿಗಳ ಪ್ರಾಣ ಪ್ರತಿಷ್ಠಾಪನಾ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕರ್ನಾಟಕದಲ್ಲಿ ವಿಶ್ವ ಬಂಡವಾಳ ಹೂಡಿಕೆಗೆ ನಮ್ಮ ವಿರೋಧ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಯೋಗ್ಯ ಭೂಮಿಯನ್ನು ಸರ್ಕಾರ ರೈತರಿಂದ ಕಿತ್ತುಕೊಂಡು ನಾನಾ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಇದು ಉದ್ಯೋಗ ಒದಗಿಸುವ ನೆಪದಲ್ಲಿ ಆಹಾರ ಕೊರತೆ ನಿರ್ಮಾಣವಾಗಲಿದೆ. ಜನ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ತಾವೇ ಅನಾಹುತಕಾರಿ ದಿನಗಳನ್ನು ಎದುರಿಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ 2 ವರ್ಷದ ಸಾಧನೆ ವಿದ್ಯುತ್ ಕೊರತೆ, ಹಣಕಾಸು ಪರಿಸ್ಥಿತಿ ಹದಗೆಡಿಸುವಿಕೆ, ಅಕ್ರಮ ಗಣಿಗಾರಿಕೆ, ಕ್ರಿಮಿನಲ್‌ಗಳು ಸಚಿವ ಸಂಪುಟದಲ್ಲಿ ಇರುವುದು, ವ್ಯಾಪಕ ಭ್ರಷ್ಠಾಚಾರ, ಕೋಮುವಾದ ಹೀಗೇ ಹತ್ತಾರು ಇವೆ. ಈ ಪಟ್ಟಿಯೇ ಇಷ್ಟು ದೊಡ್ಡದಿರುವಾಗ ಸಾಧನೆಗಳ ಪಟ್ಟಿಯನ್ನು ಹುಡುಕಬೇಕಿದೆ ಎಂದು ವ್ಯಂಗ್ಯವಾಡಿದರು.
ಪತ್ರಿಕೆಗಳಿಗೆ ನೂರಾರು ಕೋಟಿ ರು. ಜಾಹಿರಾತು ನೀಡಿ ವಿಶ್ವ ಬಂಡವಾಳ ಹೂಡಿಕೆದಾರರನ್ನು ಸ್ವಾಗತಿಸಲಾಗುತ್ತಿದೆ. ಇದರ ನೆಪದಲ್ಲೇ ಈ ಜಾಹಿರಾತುಗಳಲ್ಲಿ ಸರ್ಕಾರದ ಸಾಧನೆಯನ್ನೂ ಹೇಳಲಾಗುತ್ತಿದೆ. ಈ ಭಾರೀ ಮೊತ್ತವನ್ನು ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವಿನಿಯೋಗಿಸಿದಲ್ಲಿ ಜನರಿಗೆ ಸಹಾಯ ಆಗುತ್ತಿತ್ತು, ಸರ್ಕಾರ ಜನಪರ ಆಗುತ್ತಿತ್ತು ಎಂದು ಹೇಳಿದರು.












Click it and Unblock the Notifications