ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಣ್ಣನವರ ತತ್ವಗಳ ಜಾಗತೀಕರಣಕ್ಕೆ ಕರೆ

By Mrutyunjaya Kalmat
|
Google Oneindia Kannada News

Jagajyothi Basavanna
ಬೆಂಗಳೂರು, ಮೇ 16: ಮೇಲು-ಕೀಳು, ಲಿಂಗ ಭೇದ ಮತ್ತು ವರ್ಣ ಭೇದಗಳೆಂಬ ವಿರೋಧಾಭ್ಯಾಸಗಳ ವಿರುದ್ಧ 12 ನೇ ಶತಮಾನದಲ್ಲಿಯೇ ಚಳುವಳಿ ಆರಂಭಿಸಿದ ಕ್ರಾಂತಿಯ ಹರಿಕಾರ ಬಸವಣ್ಣನವರ ತತ್ವ ಹಾಗೂ ಅನುಭವದ ನುಡಿಗಳು ಇಂದಿನ ಜಾಗತೀಕರಣಕ್ಕೆ ನಾಂದಿಯಾಗಬೇಕೆಂದು ಸಾರಿಗೆ ಸಚಿವ ಆರ್.ಅಶೋಕ್ ಅವರು ಹೇಳಿದರು.

ಇಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಬಸವಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಾಮಾಜಿಕ ಅಸಮಾನತೆಯನ್ನು ತೊಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದು,ರಾಜ್ಯ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳು, ಸಂಶೋಧಕರು ಹಾಗೂ ವಿದ್ವಾಂಸರಾದ ಡಾ. ಎಂ.ಎಂ.ಕಲ್ಬುರ್ಗಿ ಅವರು ಮಾತನಾಡಿ ಬಸವಣ್ಣನವರು ತಾರತಮ್ಯ, ಶೊಷಣೆ ಹಾಗೂ ಸಾಮಾಜಿಕ ಅಂಕುಡೊಂಕಿನ ವಿರುದ್ಧ ಶಸ್ತ್ರ ಚಿಕಿತ್ಸೆಯನ್ನು ನಡೆಸಿದವರು. ಅವರು ಸೋಹಂ ಸಿದ್ಧಾಂತವನ್ನು ದಾಸೋಹಂಗೆ ವಿಸ್ತರಿಸಿದವರು. ವ್ಯಕ್ತಿತ್ವ ಸಾಮಾಜಿಕರಣಕ್ಕೆ ಬಸವಣ್ಣನವರೇ ಸಾಕ್ಷಿ, ಇದನ್ನೇ ಜಂಗಮ ತತ್ವವೆಂದು ತಿಳಿಸಿದ ಅವರು ಇದರಿಂದ ಮಾತ್ರ ಸಮಾಜದಲ್ಲಿ ಅಭೇದ ಸಂಸ್ಕೃತಿ ಸೃಷ್ಠಿಸಲು ಸಾಧ್ಯವೆಂದಿದ್ದರು.

ಬಸವಣ್ಣನವರ ಸಾಮಾಜಿಕ ನೀತಿಯಾಗಿದ್ದ ಸಮಸಮಾಜ ಮತ್ತು ಶ್ರಮಸಮಾಜ ಈಗ ದೇಶದಲ್ಲಿ ಸಾಕ್ಷಾತ್ಕಾರವಾಗಬೇಕಾಗಿದೆ ಎಂಬ ಆಶಯ ಅವರು ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಆರ್.ಜಯರಾಮರಾಜೇ ಅರಸ್ ಅವರು ಸಭೆಯನ್ನು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನುಬಳಿಗಾರ್ ಅವರು ವಂದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X