ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ ಸಿ : ಚಿಕ್ಕೋಡಿ ಫಸ್ಟ್, ಬೀದರ್ ಲಾಸ್ಟ್

By Mrutyunjaya Kalmat
|
Google Oneindia Kannada News

Vishweshwar Hegde Kageri
ಬೆಂಗಳೂರು, ಮೇ. 5 : ಬಹು ನಿರೀಕ್ಷಿತ ಎಸ್ಎಸ್ಎಲ್ ಸಿ 2010ರ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಘೋಷಣೆ ಮಾಡಿದ್ದಾರೆ. ಒಟ್ಟು ಶೇ. 68.77 ಫಲಿತಾಂಶವಾಗಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಬಾರಿಗೆ ಚಿಕ್ಕೋಡಿ(ಶೇ.79.92) ಜಿಲ್ಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದರೆ, ಶೈಕ್ಷಣಿಕವಾಗಿ ಹಿಂದುಳಿದ ಬೀದರ್ ಮತ್ತೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಎಂದು ಸಚಿವರು ಹೇಳಿದರು.

ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಇಲ್ಲಿ ಲಭ್ಯ

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಗ್ರಾಮಾಂತರ (ಶೇ. 79.21) ಎರಡನೇ ಸ್ಥಾನ ಹಾಗೂ ಮಂಡ್ಯ(ಶೇ.79.12) ಮೂರನೇ ಸ್ಥಾನ ಗಳಿಸಿವೆ ಎಂದರು. ಈ ವರ್ಷ ಶೇಕಡಾವಾರು ಫಲಿತಾಂಶ ಕಡಿಮೆ ಆಗಿರುವುದನ್ನು ಒಪ್ಪಿಕೊಂಡ ಅವರು, ಕಳೆದ ವರ್ಷ ಶೇ.75 ರಷ್ಟು ವಸ್ತುನಿಷ್ಠ ಮಾದರಿ ಪ್ರಶ್ನೆಗಳಿದ್ದವು. ಆದರೆ, ಈ ಬಾರಿ ಉತ್ತರ ಬರೆಯಲು ಹೆಚ್ಚು ಅವಕಾಶ ನೀಡಿದ್ದರಿಂದ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಗುಣಮಟ್ಟ ಶಿಕ್ಷಣಕ್ಕೆ ಇದು ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಸಮರ್ಥಿಸಿಕೊಂಡರು.

ಪ್ರತಿ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸುತ್ತಿದ್ದರು. ಆದರೆ, ಈ ಸಲ ಚಿಕ್ಕೋಡಿ ವಿದ್ಯಾರ್ಥಿ ವಿಕ್ರಮ ಮರೆದಿದ್ದಾರೆ. ಇದಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ವ್ಯವಸ್ಥೆ ಅಭಿನಂದನಾರ್ಹವಾಗಿದೆ. ಅಲ್ಲದೇ ಕಳೆದ ವರ್ಷ 22 ನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಈ ಸಲ 2 ನೇ ಸ್ಥಾನ ಪಡೆದುಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಆದರೆ, ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಪ್ರತಿ ವರ್ಷವೂ ಹಿಂದುಳಿಯುತ್ತಲೇ ಇರುವ ಬೀದರ್ ಜಿಲ್ಲೆಗೆ ಮತ್ತೆ ಕೊನೆಯ ಸ್ಥಾನ ಲಭಿಸಿದೆ. ಇದರ ಬಗ್ಗೆ ಸರಕಾರ ಹೆಚ್ಚಿನ ಗಮನ ಹರಿಸುತ್ತದೆ. ಬೀದರ್ ಜಿಲ್ಲೆಯ ಮೂಲಭೂತ ಶಿಕ್ಷಣಕ್ಕೆ ಬೇಕಿರುವ ಎಲ್ಲ ಅಗತ್ಯಗಳನ್ನು ಸರಕಾರ ಒದಗಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಿಸಿದರು.

ಈ ವರ್ಷ ಸುಮಾರು 86 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಅದರಲ್ಲಿ 2 ಸರಕಾರಿ ಶಾಲೆಗಳಿವೆ. ಉಳಿದ 84 ಶಾಲೆಗಳು ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿವೆ. ಶೂನ್ಯ ಫಲಿತಾಂಶಕ್ಕೆ ಕಾರಣಗಳನ್ನು ಆಯಾ ಶಾಲೆಗಳ ಮುಖ್ಯಸ್ಥರಿಂದ ಪಡೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಸರಕಾರಿ ಶಾಲೆಗಳ ಫಲಿತಾಂಶ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪಲಿತಾಂಶ ಹೆಚ್ಚು ಬಂದಿದೆ ಎಂಬ ಪ್ರಶ್ನೆಗೆ ಸರಕಾರ ಶಾಲೆಗಳೂ ಉತ್ತಮ ಫಲಿತಾಂಶ ವನ್ನೇ ನೀಡಿವೆ. ಇನ್ನಷ್ಟು ಉತ್ತಮ ಫಲಿತಾಂಶ ನೀಡಬೇಕಾಗಿತ್ತು ಎನ್ನುವುದು ಕೂಡಾ ನನ್ನ ಸ್ವಂತ ಅಭಿಪ್ರಾಯವಾಗಿದೆ ಎಂದು ಕಾಗೇರಿ ಹೇಳಿದರು.

ಪ್ರತಿ ವರ್ಷದಂತೆ ಈ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜೂನ್ 7ಕ್ಕೆ ಮರುಪರೀಕ್ಷೆ(ಸಪ್ಲಿಮೆಂಟರಿ) ನಡೆಸಲು ನಿರ್ಧರಿಸಲಾಗಿದೆ. ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಮುಂದಿನ ಪರೀಕ್ಷೆಯಲ್ಲಾದರೂ ಭವಿಷ್ಯ ರೂಪಿಸಿಕೊಳ್ಳಲು ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಕಾಗೇರಿ ಹೇಳಿದರು. ಗುರುವಾರ ಬೆಳಗ್ಗೆ ಸರಕಾರ ನಿಗದಿಪಡಿಸಿರುವ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿರುತ್ತದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X