ಶಶಿ ತರೂರ್ ಗೆ ದಾವೂದ್ ಕೊಲೆ ಬೆದರಿಕೆ

ಲಲಿತ್ ಮೋದಿಯ ಕ್ಷಮೆ ಕೇಳದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ದಾವೂದ್ ಇಬ್ರಾಹಿಂ ಬೆದರಿಸಿರುವುದಾಗಿ ತಿಳಿದುಬಂದಿದೆ. ಈ ವಿಷಯವನ್ನು ಶಶಿ ತರೂರ್ ಅವರ ವಿಶೇಷ ಕರ್ತವ್ಯಾಧಿಕಾರಿ ದೃಢಪಡಿಸಿದ್ದಾರೆ. ಬೆದರಿಕೆ ಬಂದಿರುವುದನ್ನು ಗೃಹ ಮಂತ್ರಾಲಯಕ್ಕೂ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಕೊಚ್ಚಿ ಫ್ರಾಂಚೈಸಿಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಜಟಾಪಟಿ ನಾನಾ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ವಿದೇಶಾಂಗ ಖಾತೆ ಸಚಿವರಾಗಿದ್ದರೂ ಫ್ರಾಂಚೈಸಿಯಲ್ಲಿ ಆಸಕ್ತಿ ತೋರಿಸುತ್ತಿರುವ ಶಶಿ ತರೂರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಿಜೆಪಿ ದನಿ ಎತ್ತಿತ್ತು. ಕೊಚ್ಚಿ ಫ್ರಾಂಚೈಸಿ ಪಾಲುದಾರರಾಗಿರುವ ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ ಕಂಪನಿಯಲ್ಲಿ ತರೂರ್ ಮದುವೆಯಾಗುತ್ತಾರೆನ್ನಲಾದ ಸುನಂದಾ ಪುಷ್ಕರ್ ಅವರು ಶೇ.18ರಷ್ಟು ಪಾಲುದಾರಿಕೆ ಹೊಂದಿದ್ದಾರೆ.
ಸುನಂದಾ ಪುಷ್ಕರ್ ಅವರ ಹೆಸರನ್ನು ಲಲಿತ್ ಮೋದಿ ಬಹಿರಂಗಪಡಿಸಿದ್ದೇ ಶಶಿ ತರೂರ್ ಮತ್ತು ಲಲಿತ್ ಮೋದಿ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ. ಕೊಚ್ಚಿ ತಂಡ ಕೊಳ್ಳುವವರ ಹೆಸರನ್ನು ಬಹಿರಂಗಪಡಿಸಬಾರದೆಂದು ಮೋದಿಗೆ ತರೂರ್ ತಾಕೀತು ಮಾಡಿದ್ದರು.
ಆದರೆ, ಈ ಹಗರಣದಲ್ಲಿ ದಾವೂದ್ ಇಬ್ರಾಹಿಂ ಮೂಗು ತೂರಿಸಿರುವುದು ಮತ್ತು ಮೋದಿ ಬೆಂಬಲಕ್ಕೆ ದಾವೂದ್ ಮುಂದೆ ಬಂದಿರುವುದು ಅನೇಕರ ಹುಬ್ಬು ಏರುವಂತೆ ಮಾಡಿದೆ. ಐಪಿಎಲ್ ಪಾಲುದಾರಿಕೆಯಲ್ಲಿ ದಾವೂದ್ ಇಬ್ರಾಹಿಂ ಹಣದ ಕೈವಾಡವೂ ಇರಬಹುದೆ ಎಂಬ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ.











Click it and Unblock the Notifications