ಸವಣೂರ ಪುರಸಭೆಯ ಗೋಲ್ ಮಾಲ್ ರಾಧಾಕೃಷ್ಣರು

ಪುರಸಭೆಯ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನಿವೇಶನದ ಹಂಚಿಕೆ ಕುರಿತಂತೆ ಸುಧೀರ್ಘ ಚರ್ಚೆಗೆ ಮುಂದಾದ ಸದಸ್ಯರು, ಕ್ಷಣಕ್ಕೊಂದು ಮಾತು, ಜಗಳ, ವಾಗ್ವಾದ, ಅಸಭ್ಯ ವರ್ತನೆ ತೋರುವ ಮೂಲಕ ಸಭೆಯಲ್ಲಿ ಗೊಂದಲ ಮೂಡಿಸಿದರು.
ಈ ಹಿಂದಿನ ಹಲವು ಸಭೆಗಳಲ್ಲಿಯೂ ಚರ್ಚೆಗೊಂಡು, ನಿರ್ಣಯಿಸಿ, ಅನುಮೋದನೆಯನ್ನು ಪಡೆಯುವಲ್ಲಿ ವಿಫಲವಾಗಿದ್ದ ಈ ನಿವೇಶನ ಹಂಚಿಕೆ ವಿವಾದ ಈ ಸಭೆಯಲ್ಲಿ ಪ್ರಮುಖ ಘಟ್ಟವನ್ನು ತಲುಪಿದ್ದು, ಸವಣೂರಿನ ಕೀರ್ತಿ ಶಾಲೆಗೆ 7 ಗುಂಟೆ ಹಾಗೂ ಉಳಿದ ನಿವೇಶನದಲ್ಲಿ ಎಸ್.ಪಿ.ಬಿ, ಎಚ್.ಕೆ.ಪಿ ಶಾಲೆಗಳಿಗೆ ಸಮಾನವಾಗಿ ಹಂಚಿಕೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಇಂದಿಗೂ ಸಮರ್ಪಕವಾದ ಅಳತೆ ಇಲ್ಲದ, ಅತಿಕ್ರಮಣಕ್ಕೆ ಒಳಗಾಗಿರುವ ನಿವೇಶನವನ್ನು ಖಾಸಗಿ ಶಾಲೆಗಳಿಗೆ ಬಳುವಳಿ ನೀಡಿದ ಪುರಸಭೆ, ಶಿಥಿಲಗೊಂಡಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ನೀಡಬೇಕು ಎಂಬ ಪ್ರಸ್ತಾವನೆಯ ಬಗ್ಗೆ ಮಾತ್ರ ಜಾಣ ಮರೆವು ತೋರಿತು. ಸದರಿ ನಿವೇಶನದಲ್ಲಿ 6 ಗುಂಟೆ ಸ್ಥಳವನ್ನು ಒಂದು ದರ್ಗಾ ಅತಿಕ್ರಮಣ ಮಾಡಿದೆ. ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎ.ಎಮ್ ಫರಾಶ್ ತಿಳಿಸಿದರೂ, ಅದು ಸಭೆಯ ಗದ್ದಲದಲ್ಲಿ ಲೀನವಾಯಿತು. ನಿವೇಶನದ ಗಡಿ ನಿಗದಿ ಪಡಿಸಬೇಕು ಎಂದು ಈ ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿದ್ದರೂ, ಅದು ಕಾರ್ಯರೂಪಕ್ಕೆ ಬರುವ ಮುನ್ನವೆ ನಿವೇಶನ ಹಂಚಿಕೆ ಕೈಗೊಳ್ಳಲಾಯಿತು.
ನಗರ ವ್ಯಾಪ್ತಿಯಿಂದ ದೂರದಲ್ಲಿರುವ ಬೇವಿನಹಳ್ಳಿ, ಇಸ್ಲಾಂಪೂರ ಗ್ರಾಮದ ಬಳಿಯ ಹೊಲವನ್ನೂ ವಸತಿ ವಿನ್ಯಾಸಕ್ಕಾಗಿ ಭೂ ಪರಿವರ್ತನೆಗೊಳಿಸಲು ಮುಂದಾದ ಪುರಸಭೆಯ ಅಧಿಕಾರಿಗಳು ಸಭೆಯಲ್ಲಿ ಅಪಹಾಸ್ಯಕ್ಕೆ ಒಳಗಾದರು. ಪುರಸಭೆಯ ವ್ಯಾಪ್ತಿಯನ್ನೂ ಮೀರಿ ದೂರದಲ್ಲಿನ ಹೊಲವನ್ನು ಎನ್.ಎ ಮಾಡುವ ಪ್ರಸ್ತಾವನೆಯನ್ನು ಸದಸ್ಯರು ತಿರಸ್ಕರಿಸಿದರು.
ಉಪಹಾರಕ್ಕಾಗಿ 9 ಸಾವಿರ, ಝೆರಾಕ್ಸ್ ಮಾಡಿಸಲು 3900, ಮುದ್ರಣಕ್ಕಾಗಿ 8 ಸಾವಿರ, ವಿದ್ಯುತ್ ಸಾಮಗ್ರಿ ಖರೀದಿಗಾಗಿ 6.16 ಲಕ್ಷ ರೂ.ಗಳನ್ನು ವೆಚ್ಚ ಮಾಡಿರುವ ಬಗ್ಗೆ ಆಕ್ಷೇಪಿಸಿದ ಸದಸ್ಯ ಜಿ.ಎಮ್ ಪಠಾಣ, ಪುರಸಭೆಯ ಜಮಾ-ಖರ್ಚು ವಿಷಯದಲ್ಲಿ ಅವ್ಯವಹಾರ ಆಗಿದೆ. ಈ ಬಗ್ಗೆ ಪುನಃ ಪರಿಶೀಲನೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲಕ್ಷಾಂತರ ರೂ. ಮೌಲ್ಯದ ಸೋಡಿಯಂ ಬಲ್ಬಗಳನ್ನು ಮೂರು ಬಾರಿ ಖರೀದಿಸಿದ್ದರೂ, ಅವುಗಳನ್ನು ಅಳವಡಿಸುವಲ್ಲಿ ಕೆಲವು ವಾರ್ಡಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂಬ ಆಕ್ಷೇಪಣೆಗಳು ವ್ಯಕ್ತವಾದವು.
ಪುರಸಭೆಯ ವಿದ್ಯುತ್ ಸಾಮಗ್ರಿಗಳನ್ನು ಗೊಡಚಿ ಎಂಬ ಗುತ್ತಿಗೆದಾರರ ಬಳಿಯಲ್ಲಿಯೇ ನಿರಂತರವಾಗಿ ಖದೀರಿಸುತ್ತಿರುವ ಬಗ್ಗೆ ಅಪಹಾಸ್ಯ ಮಾಡಿದ ಸದಸ್ಯರು, ಗೊಡಚಿಗೆ ನೀಡದಿದ್ದರೆ ಪುರಸಭೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವದಿಲ್ಲ. ಪ್ರತಿ ಟೆಂಡರ್‌ನಲ್ಲಿಯೂ 4-5 ಹೆಸರಿನಲ್ಲಿ ಅರ್ಜಿ ಹಾಕುವ ಗೊಡಚಿ "ಮಾಲು ಚೊಲೋ ಕೊಡತಾನ" ಎಂದು ಟೀಕಿಸಿದರು.
ನಗರದ ಪ್ರತಿಯೊಂದು ವಾರ್ಡಗಳಲ್ಲಿಯೂ 5 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಆರಂಭಿಸಲಾಗಿದೆ, ಹೆಚ್ಚುವರಿ 5 ಕೋಟಿ ರೂ.ಗಳ ಅನುದಾನ ಪುರಸಭೆಗೆ ಲಭಿಸುವ ಬಗ್ಗೆಯೂ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಈ ಹಂತದಲ್ಲಿ ಪುರಸಭೆಯ ಎಲ್ಲ ಸದಸ್ಯರು, ಕಾಮಗಾರಿಗಳ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಗಮನ ನೀಡಬೇಕು ಎಂದು ಸೂಚಿಸಿದ ಅಧ್ಯಕ್ಷ ಎ.ಎಮ್ ಫರಾಶ್, ಪುರಸಭೆಯ ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಲಾಗಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.











Click it and Unblock the Notifications