ಶ್ರೀಗಳ ತೇಜೋವಧೆಗೆ ಯತ್ನಿಸಿದವರ ಬಂಧನ

ರಾಘವೇಶ್ವರ ಸ್ವಾಮೀಜಿಯ ತದ್ರೂಪಿಯಂತೆ ಕಾಣುತ್ತಿದ್ದ ಕೋಟಿತೀರ್ಥದ ನಿವಾಸಿ ರವಿ ಕೊಡ್ಲೇಕರ ಅಲಿಯಾಸ್ ಬಾಲಚಂದ್ರ ಪ್ರಭಾಕರ ಕೊಡ್ಲೇಕರ (26), ಗೋಕರ್ಣದ ರಥಬೀದಿಯ ನಿವಾಸಿ ಶಿವರಾಮ ಅಡಿ (29) ಮತ್ತು ಗಜಾನನ ಸಾಂಬ ಉಪಾಧ್ಯಾಯ (42) ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ಇನ್ನೂ ಒಂಬತ್ತು ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಕಾವಿ ಧರಿಸಿದರೆ ಥೇಟ್ ರಾಘವೇಶ್ವರ ಶ್ರೀಗಳಂತೆ ಕಾಣುತ್ತಿದ್ದ ರವಿ ಕೊಡ್ಲೇಕರನನ್ನು ಬಳಸಿ ಕೇರಳದ ಗೆಸ್ಟ್ ಹೌಸ್ ಒಂದರಲ್ಲಿ ರವಿ ಮುಖವನ್ನು ಮರೆಮಾಚಿ ಅಶ್ಲೀಲ ದೃಶ್ಯಗಳಲ್ಲಿ ಭಾಗಿಯಾಗಿದ್ದ ಅರೆನಗ್ನ ಯುವತಿಯ ರಾಸಲೀಲೆಯ ಚಿತ್ರ ತೆಗೆಯಲಾಗಿತ್ತು. ಬಂಧಿತರಲ್ಲಿ ಬಾಲಚಂದ್ರ ಫೋಟೋ ತೆಗೆದಿದ್ದರೆ, ಮಿಕ್ಸಿಂಗ್ ನಲ್ಲಿ ನಿಷ್ಣಾತನಾಗಿದ್ದ ಗಜಾನನ ಮುಂದಿನ ಕೆಲಸ ಮಾಡಿದ್ದ.
ಶ್ರೀರಾಮಚಂದ್ರಾಪುರ ಮಠ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ಆದಾಯದಲ್ಲಿ ಖೋತಾ ಕಂಡಿದ್ದ ಪುರೋಹಿತರ ಗುಂಪೊಂದು ರಾಘವೇಶ್ವರ ಸ್ವಾಮೀಜಿಯ ವಿರುದ್ಧ ಕತ್ತಿ ಮಸೆಯುತ್ತಿತ್ತು ಎನ್ನಲಾಗಿದೆ. ಈ ತಂಡವೇ ಅಶ್ಲೀಲ ಸಿಡಿ ತಯಾರಿಕಾ ಕ್ರಿಯೆಯಲ್ಲಿ ಭಾಗಿಯಾಗಿದೆ.
ಈ ಸಿಡಿ ಹಗರಣದ ಹಿಂದೆ ದೊಡ್ಡ ಜಾಲವೇ ಇದ್ದು, ಈ ಪ್ರಕರಣವನ್ನು ತನಿಖೆಗಾಗಿ ಸಿಓಡಿಗೆ ಒಪ್ಪಿಸಬೇಕೆಂದು ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್ ಆಗ್ರಹಿಸಿದ್ದಾರೆ.












Click it and Unblock the Notifications