ಬೇಲಿಯೇ ಎದ್ದು ಹೊಲ ಮೇಯ್ದಾಗ !!

ವಿಶೇಷ ಕಾರ್ಯಪಡೆಯ (STF) ಏಳು ಮಂದಿ ಅಧಿಕಾರಿಗಳು ಸಮವಸ್ತ್ರ ಧರಿಸದೆ(ಮಫ್ತಿ) ನಗರದಲ್ಲಿ ಮಾರ್ಚ್ 11ರಂದು ಇಬ್ಬರು ಉದ್ಯಮಿಗಳನ್ನು ಲೂಟಿ ಮಾಡಿದ್ದಾರೆ. ಸ್ಟಾಕ್ ದಲ್ಲಾಳಿಯ ಅಂಗಡಿಗೆ ನುಗ್ಗಿದ ದರೋಡೆಕೋರ ಕಮ್ ಈ ಪೋಲಿಸ್ ಅಧಿಕಾರಿಗಳು ಆರು ಲಕ್ಷ ರೂಪಾಯಿ ದೋಚಿದ್ದಾರೆ. ಅದೇ ದಿನ ವಿ ಕೆ ಮಲ್ಹೋತ್ರ ಎನ್ನುವವರ ಆಭರಣ ಅಂಗಡಿಗೆ ನುಗ್ಗಿದ ಇವರು ಅವರಿಂದ 10ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.
ಆದರೆ ಮಲ್ಹೋತ್ರ ಒಂದು ಲಕ್ಷ ರೂಪಾಯಿ ಮಾತ್ರ ನೀಡಿ ಉಳಿದ ಹಣವನ್ನು 30 ನಿಮಿಷದಲ್ಲಿ ಹೊಂದಿಸಿ ಕೊಡುತ್ತೇನೆಂದು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ. ನಂತರ ಈ ತಂಡದ ಒಬ್ಬ ಸದಸ್ಯ ಉಳಿದ ಹಣ ತೆಗೆದುಕೊಳ್ಳಲು ಮಲ್ಹೋತ್ರ ಬಳಿಗೆ ಬಂದಾಗ ಬಾಕಿ 9ಲಕ್ಷರೂಪಾಯಿ ಹಣವನ್ನು ಪೋಲಿಸ್ ಅಧಿಕಾರಿಗಳ ಮುಂದೆ ಕೊಡುವುದಾಗಿ ಹೇಳಿದಾಗ ಈ ಡೋಂಗಿ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾನೆ.
ಆದರೆ ಮಲ್ಹೋತ್ರ ಈ ತಂಡದ ಜೊತೆ ನಡೆಸಿದ ಮಾತುಕತೆಯನ್ನು ತನ್ನ ಭದ್ರತಾ ಕ್ಯಾಮರದಲ್ಲಿ ಸೆರೆ ಹಿಡಿದಿದ್ದರು. ಮಲ್ಹೋತ್ರ ಇದಕ್ಕೆ ಸಂಬಂಧಿಸಿದ ಟೇಪ್ ಅನ್ನು ಹರ್ಯಾಣ ಪೋಲಿಸ್ ಆಯುಕ್ತರಿಗೆ ನೀಡಿದ್ದಾರೆ. ಈ ತಂಡದಲ್ಲಿದ್ದ ಒಬ್ಬ ಸದಸ್ಯನನ್ನು ವಿಶೇಷ ಕಾರ್ಯಪಡೆಗೆ ಸೇರುವ ಮುಂಚೆ ಪಾಣಿಪಟ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್ ಸ್ಟೇಬಲ್ ಜಗ್ಬೀರ್ ಸಿಂಗ್ ಎಂದು ಆಯುಕ್ತರು ಪತ್ತೆ ಹಚ್ಚಿದ್ದಾರೆ.
2007ರಲ್ಲಿ ಇಪ್ಪತ್ತು ಮಂದಿಯ ಈ ವಿಶೇಷ ತಂಡವನ್ನು ಭಯೋತ್ಪಾದನೆ, ನಕ್ಸಲ್ ಮತ್ತು ಅಪರಾಧ ತಡೆಗಟ್ಟಲು ಸರಕಾರ ನಿಯೋಜಿಸಿತ್ತು. ಈ ಘಟನೆಯ ನಂತರ ಮುಜುಗರಕ್ಕೊಳಗಾಗಿರುವ ಸರಕಾರ ವಿಶೇಷ ಕಾರ್ಯಪಡೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಿದೆ.












Click it and Unblock the Notifications