ಬಿಬಿಎಂಪಿ : ಸರಕಾರದ ನಿರ್ಧಾರ ಫೆ.23ಕ್ಕೆ ಪ್ರಕಟ
ಹುಬ್ಬಳ್ಳಿ, ಫೆ. 22 : ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನೀಡಿರುವ ಆದೇಶದ ಪ್ರತಿ ಪರಿಶೀಲನೆ ನಡೆಸಿ ಸರಕಾರದ ನಿರ್ಧಾರವನ್ನು ನಾಳೆ (ಫೆ. 23) ಪ್ರಕಟಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ನಿಗದಿತ ವೇಳೆಗೆ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಸಿದ್ಧವಿದೆ ಎಂದು ಆಯೋಗದ ಕಾರ್ಯದರ್ಶಿ ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಿದ್ದರು. ಬಿಬಿಎಂಪಿ ಚುನಾವಣೆಗೆ ಕಾಲಾವಕಾಶ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರಿಂಕೋರ್ಟ್ ವಜಾಗೊಳಿಸಿದೆ ಹಾಗೂ ಹೈಕೋರ್ಟ್ ನಿಗದಿ ಪಡಿಸಿರುವ ವೇಳೆಗೆ ಚುನಾವಣೆ ನಡೆಸುವಂತೆ ಆದೇಶಿಸಿದ್ದು, ಈ ಬಗ್ಗೆ ಸುಪ್ರಿಂಕೋರ್ಟ್ ನೀಡಿರುವ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಆದೇಶದ ಪ್ರತಿ ಸಿಕ್ಕ ನಂತರ ಅದರ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಫೆ 23 ರಂದು ಸರಕಾರ ತನ್ನ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಾಲಾವಕಾಶಕ್ಕೆ ಹೈಕೋರ್ಟ್ ಮೊರೆ
ಈಗಾಗಲೇ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಬಿಎಂಪಿ ಚುನಾವಣೆಗಳನ್ನೇ ಮುಂದೂಡುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದರು.
ಸೋಲಿನ ಭಯ, ದೇವೇಗೌಡ
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಮುಖಭಂಗವಾಗಿದೆ. ಇನ್ನಾದರೂ ಪಾಠ ಕಲಿಯಲಿ. ಹೈಕೋರ್ಟ್ ನಿಗದಿಪಡಿಸಿದ ಸಮಯಕ್ಕೆ ಚುನಾವಣೆ ನಡೆಸಲು ಆಗುತ್ತಿಲ್ಲವೇಕೆ ? ಸರಕಾರಕ್ಕೆ ಸೋಲಿನ ಭಯ ಇರುವುದರಿಂದ ಬಿಬಿಎಂಪಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ವ್ಯಂಗ್ಯವಾಡಿದರು.











Click it and Unblock the Notifications