ದಕ್ಷಿಣದಲ್ಲಿ ಬೆವರಿನ ಜಳಕ, ಉತ್ತರದಲ್ಲಿ ಮಳೆಯ ಪುಳಕ

ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಬಸವನಬಾಗೇವಾಡಿಯಲ್ಲಿ 1 ಸೆಂ.ಮೀ. ಮಳೆ ಸುರಿದಿದೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿಯೂ ಜಿಗುರು ಮಳೆ ತಾಪವನ್ನು ಕೆಲಮಟ್ಟಿಗೆ ಇಳಿಸಿದೆ. ಆದರೆ, ಕರ್ನಾಟಕ ಬಂದ್ ನಿಂದ ಬೆಂದಿದ್ದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕೃತಿ ತನ್ನ ಕೃಪಾಕಟಾಕ್ಷ ತೋರಿಲ್ಲ. ಅಲ್ಲಿ ಎಂದಿನಂತೆ, ಒಣಹವೆ ಮುಂದುವರಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅತಿ ಕಡಿಮೆ ತಾಪಮಾನ 16.8ರಷ್ಟು ದಾಖಲಾಗಿದೆ. ಆದರೆ, ಉದ್ಯಾನ ನಗರಿ, ಎಸಿ ಸಿಟಿ ಅಂತೆಲ್ಲ ಒಂದಾನೊಂದು ಕಾಲದಲ್ಲಿ ಕರೆಯಿಸಿಕೊಳ್ಳುತ್ತಿದ್ದ ಬೆಂಗಳೂರು ವಾಸಿಗರಿಗೆ ಈಗಲೇ ಬೇಸಿಗೆ ಕಾಲಿಟ್ಟಂತೆ ಭಾಸವಾಗುತ್ತಿದೆ. ಇಲ್ಲಿ ಗರಿಷ್ಠ ತಾಪಮಾನ 33.5 ಡಿಗ್ರಿಯಷ್ಟು ತಲುಪಿದ್ದು ಕಾವು ದಿನೇದಿನೇ ಏರುತ್ತಿದೆ. ಕಾಣೆಯಾಗಿರುವ ಮರಗಳು ಮತ್ತು ಹೆಚ್ಚುತ್ತಿರುವ ಫ್ಲೈಓವರುಗಳ ಸಂಖ್ಯೆ ಬೆಂಗಳೂರಿನ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿವೆ. ನೀರಿನ ಅನುಕೂಲತೆಯಿದ್ದವರು ಸಂಜೆ ಮನೆ ತಲುಪಿದಾಗ ಇನ್ನೊಮ್ಮೆ ಜಳಕ ಮಾಡಬೇಕು, ಹಾಗಿದೆ ಇಲ್ಲಿನ ಝಳ.
ಫೆಬ್ರವರಿ ತಿಂಗಳು ಮುಗಿಯುತ್ತ ಬಂದಂತೆ ತಾಪಮಾನ ಇನ್ನಷ್ಟು ಏರುತ್ತದೆಂದು ಹವಾಮಾನ ಇಲಾಖೆ ಹೇಳಿದೆ. ಅಕಾಲಿಕ ಮಳೆಯಲ್ಲಿ ತಣಿಯಲು ಬೆಂಗಳೂರಿಗರು ಮಾರ್ಚ್ ಅಥವಾ ಏಪ್ರಿಲ್ ತಿಂಗಳು ಬರುವವರೆಗೆ ಕಾಯಬೇಕು. ದಿನಕ್ಕೆ ಮೂರು ತಾಸು ಆಟ ಆಡಿಸುತ್ತಿರುವ ಕರೆಂಟು ಫ್ಯಾನು ನಂಬಿಕೊಂಡಿರುವವರ ಜೀವನವನ್ನು ಮತ್ತಷ್ಟು ಅಸಹನೀಯವಾಗಿಸಿದೆ.
ಇದೆಲ್ಲದರ ನಡುವೆ, ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ಕರೆಂಟ್ ಕಟ್ ಮಾಡುವುದಿಲ್ಲ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆ ವಿದ್ಯಾರ್ಥಿಗಳಿಗೆ ಮಳೆಸಿಂಚನದ ಅನುಭವ ನೀಡಿದ್ದರೆ, ಬಜೆಟ್ ಸರ್ಕಸ್ಸಿನಲ್ಲಿ ತೊಡಗಿರುವ ಅದೇ ಮುಖ್ಯಮಂತ್ರಿಗಳು ತೆರಿಗೆ ಹೆಚ್ಚಿಸುವುದು ಅನಿವಾರ್ಯವೆಂದು ಹೇಳಿ ಸಾರ್ವಜನಿಕ ವಲಯದಲ್ಲಿ ಬಿರುಬೇಸಿಗೆಯ ಬೆವರಿನ ಸುರಿವನ್ನು ದುಪ್ಪಟ್ಟು ಮಾಡಿದ್ದಾರೆ. ಯಾರಿಗೆ ತಂಪು, ಯಾರಿಗೆ ಮುಖ ಕೆಂಪು ಎಂಬುದನ್ನು ತಿಳಿಯಲು ಮಾರ್ಚ್ 5ರವರೆಗೆ ಕಾಯಬೇಕು.












Click it and Unblock the Notifications