ಯಡ್ಡಿ ವಿರುದ್ಧ ಪೊಲೀಸ್ ಕಂಪ್ಲೇಂಟ್

ಕಲಬುರ್ಗಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಮ ಪ್ರಭು ಪಾಟೀಲ್ ಬ್ರಹ್ಮಾಪುರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಓರ್ವ ಮುಖ್ಯಮಂತ್ರಿಯಾಗಿ ಇಂಥ ಮಾತನಾಡುವುದು ಯಡಿಯೂರಪ್ಪನವರಿಗೆ ತರವಲ್ಲ. ಈ ಬಗೆಯ ಹೇಳಿಕೆಗಳು ಜನತೆಗೆ ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಪ್ರಚೋದನೆ ನೀಡುತ್ತವೆ ಎಂದು ಹೇಳಿದರು.
ಎಲ್ಲರಿಗೂ ಮಾತನಾಡುವುದಕ್ಕೆ ಹಕ್ಕಿದೆ. ಆದರೆ ಮಾತನಾಡುವ ಹಕ್ಕನ್ನೇ ತುಳಿಯುವ ಯಡ್ಡಿ ಅವರ ಧೋರಣೆ ಪ್ರಜೆಗಳ ಸಂವಿಧಾನದತ್ತ ಹಕ್ಕುಗಳನ್ನು ಮರ್ದನ ಮಾಡುತ್ತವೆ ಎಂದು ಅವರು ಆರೋಪಿಸಿದರು.
ಸೋಮವಾರ ಗುಲಬರ್ಗಾದಲ್ಲಿ ಜರುಗಿದ ಆರೋಗ್ಯಶ್ರೀ ಯೋಜನೆ ಉದ್ಘಾಟನೆ ಮಾಡಿ ಮಾತನಾಡುವಾಗ ಬಿಎಸ್ ವೈ ಅವರು ವಿರೋಧಪಕ್ಷಗಳ ವಿರುದ್ಧ ಕೆಂಡ ಕಾರಿದ್ದರು. ತಮ್ಮ ವಿರುದ್ಧ ಪದೇಪದೇ ಟೀಕೆ ಮಾಡುವ ವಿರೋಧ ಪಕ್ಷದವರ ನಾಲಗೆಗಳನ್ನು ಕತ್ತರಿಸುವಂತೆ ತಮ್ಮ ಪಕ್ಷದವರಿಗೆ ಕರೆಕೊಟ್ಟರೆಂದು ವರದಿಯಾಗಿತ್ತು.
ಬೆಂಗಳೂರು ವರದಿ : ಮುಖ್ಯಮಂತ್ರಿಗಳ ಹೇಳಿದ 'ನಾಲಗೆ ಕತ್ತರಿಸಿ' ಹೇಳಿಕೆಯನ್ನು ವಿರೋಧಿಸಿ ಇಂದು ಪ್ರದೇಶ ಕಾಂಗ್ರೆಸ್ ನಾಯಕರು ನಗರದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಉಪಾಧ್ಯಕ್ಷ ಡಿಕೆ ಶಿವಕುಮಾರ್ ಮತ್ತಿತರ ಮುಖಂಡರು ಮಹಾತ್ಮಾ ಗಾಂಧೀ ಪ್ರತಿಮೆ ಬಳಿ ಧರಣಿ ಮಾಡಿದರು. ಆನಂತರ ಸೀದಾ ರಾಜಭವನಕ್ಕೆ ತೆರಳಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಂಪ್ಲೇಂಟು ಕೊಟ್ಟರು.
ಶಿವಮೊಗ್ಗ ವರದಿ : ಬಿ.ಎಸ್.ಯಡಿಯೂರಪ್ಪ ಗುಲ್ಬರ್ಗಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ, "ನನ್ನ ವಿರುದ್ಧ ಯಾರಾದರೂ ಟೀಕೆ ಮಾಡಿದಲ್ಲಿ ಅವರ ನಾಲಿಗೆಯನ್ನು ಸೀಳಿ" ಎಂದು ಹೇಳಿಕೆ ನೀಡುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಲು ಹೊರಟಿದ್ದಾರೆಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿರುವ .ಯಡಿಯೂರಪ್ಪ ಈ ರೀತಿ ನಾಲಿಗೆ ಸೀಳುತ್ತೇನೆ ಎಂದು ಬೆದರಿಕೆಯೊಡ್ಡುವುದು ಅವರ ಸ್ಥಾನಮಾನಕ್ಕೆ ಸರಿಹೊಂದುವುದಲ್ಲ. ಮುಖ್ಯಮಂತ್ರಿಯೊಬ್ಬ ಈ ರೀತಿ ಜೀವ ಬೆದರಿಕೆಯೊಡ್ಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ನ ನಗರಾಧ್ಯಕ್ಷ ರಂಗನಾಥ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ, ವಿಜಯಕುಮಾರ್, ಮಧುಸೂಧನ್, ರಂಜಿತ್, ಪ್ರಶಾಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.












Click it and Unblock the Notifications