ಈಗ ಆಪರೇಶನ್ ಪಾಪಾಸುಕಳ್ಳಿ

ಭಿನ್ನಮತೀಯ ಶಾಸಕರ ಒಂದು ದೊಡ್ಡ (18 ಶಾಸಕರು) ಗುಂಪು ಹಗಲಿರುಳು ಸರಕಾರ ಹಾಗೂ ತಮ್ಮ ವಿರುದ್ಧ ಮೆಣಸಿನಕಾಯಿ ಅರೆಯುತ್ತಿದೆ ಎಂಬ ಪ್ರಜ್ಞೆ ಯಡ್ಡಿಗಿಲ್ಲದಿಲ್ಲ. ಇದನ್ನು ಹೀಗೆ ಬಿಟ್ಟರೆ ಮುಂದೊಂದು ಕಂಟಕವಾಗುತ್ತದೆಂದು ಅವರಿಗೆ ಗೊತ್ತಿಲ್ಲದೆಯೇನೂ ಇಲ್ಲ. ಹಾಗಾದರೆ ದಾರಿ ಏನು?
ಇರುವುದೊಂದೇ ದಾರಿ. ಮತ್ತೆ ಆಪರೇಷನ್ ಮಾಡು ಸರ್ವಜ್ಞ ಎಂಬ ಮಂತ್ರ ಭಾಜಪ ವಲಯಗಳಿಂದ ಕೇಳಿ ಬರುತ್ತಿದೆ. ಈ ಮಂತ್ರಕ್ಕೆ ಎರಡು ಮಾವಿನ ಕಾಯಿಗಳು ಉದುರಬೇಕು. ಮಂತ್ರಿಗಿರಿಗೆ ಶಬರಿಯಂತೆ ಕಾದುಕಾದು ಬೇಸತ್ತಿರುವ ರೇಣುಕಾಚಾರ್ಯ, ಶಿವಾನಂದ ನಾಯಕ, ಅಸ್ನೋಟಿಕರ್, ಬೇಳೂರು ಗೋಪಾಲಕೃಷ್ಣ ಬಳಗದ ಹಲ್ಲು ಕೀಳಬೇಕು ಜತೆಗೆ ಬರಲಿರುವ ಬಿಬಿಎಂಪಿ ಚುನಾವಣೆಯಲ್ಲಿ (ಡಿಸೆಂಬರ್ 21) ಬಿಜೆಪಿ ಗೆದ್ದು ಬೆಂಗಳೂರನ್ನು ಆಳಬೇಕು. ಅಂದಹಾಗೆ, ಮೇಲ್ಮನೆ ಚುನಾವಣೆಯಲ್ಲಿ (ಡಿಸೆಂಬರ್ 18) ಗೆಲ್ಲಬೇಕು, ಗೆದ್ದು ಅಲ್ಲೂ ಬಹುಮತ ಸಾಧಿಸಬೇಕು.
ಸರಕಾರವನ್ನು ಭದ್ರಮಾಡಿಟ್ಟುಕೊಳ್ಳುವುದು ಮತ್ತು ಯಾವುದೇ ಕ್ಷಣ ಸರಕಾರಕ್ಕೆ ಅಪಾಯ ಬಂದೊದಗಿದರೆ ಈಗಲೇ ಅದಕ್ಕೆ ಸಿದ್ಧವಾಗಿರಬೇಕು ಎನ್ನುವುದು ಆಳುವ ಬಿಜೆಪಿ ಗುಂಪಿನ ಲೆಕ್ಕಾಚಾರ. ಅಲ್ಪ ಬಹುಮತ ಯಾವತ್ತಿದ್ದರೂ ಗಂಡಾಂತರಕಾರಿ. ಇಂಥ ಸಂದರ್ಭದಲ್ಲಿ ಸರಕಾರ ಉರುಳಿಸಲು ಪ್ರತಿಪಕ್ಷಗಳು ಷಡ್ಯಂತ್ರ ನಡೆಸಬಹುದು. ಅಲ್ಲದೆ, ಅತೃಪ್ತ ಶಾಸಕರು ಬ್ಲ್ಯಾಕ್ ಮೇಲ್ ಮಾಡಬಹುದು. ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸಲು ಆಗುವುದಿಲ್ಲ. ಇದಕ್ಕೆಲ್ಲ ತೆರೆ ಎಳೆಯುವುದು ಹಾಗೂ ಸರಕಾರವನ್ನು ಹೆಚ್ಚಿನ ಬಹುಮತದತ್ತ ಕೊಂಡೊಯ್ಯುವುದಕ್ಕೆ ಏಕಮಾತ್ರ ಗುಳಿಗೆ ಆಪರೇಶನ್ ಕಮಲ.
ಆಪರೇಶನ್ನಿಗೆ ಈಗಾಗಲೇ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಕಮಲದ ಮಾತುಕತೆಗಳಲ್ಲಿ ಸಚಿವರಾದ ಆರ್. ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕರುಣಾಕರ ರೆಡ್ಡಿ ಹಾಗೂ ಗೋವಿಂದ ಕಾರಜೋಳ ಭಾಗವಹಿಸಿದ್ದಾರೆ. ತಮಾಷೆಯೆಂದರೆ, ಎಂದಿನಂತೆ ಆಪರೇಶನ್ ಕಮಲ ಕಾರ್ಯಾಚರಣೆಗೆ ರೆಡ್ಡಿಗಳ ಬೆಂಬಲ ಇದೆ. ರೆಡ್ಡಿಗಳ ಬಲ ಬೆಂಬಲ ಇಲ್ಲದೆ ಆಪರೇಶನ್ ಆಗುವುದಿಲ್ಲ ಎಂಬ ಮಟ್ಟಿಗೆ ಬಿಜೆಪಿ ರಾಜಕೀಯ ಅವಲಂಬಿತವಾಗಿದೆ. ಇವೆಲ್ಲದರ ಜತೆಗೆ ಬೆಂಗಳೂರಿನ 198 ವಾರ್ಡುಗಳಲ್ಲಿ ಬಿಜೆಪಿ ಬಲಾಬಲದ ಪತ್ತೆ ಆಗಬೇಕು. ಆಪರೇಶನ್ ಎಲ್ಲೆಲ್ಲಿ ಅಗತ್ಯ ಎಂಬ ಹುಡುಕಾಟಕ್ಕೆ ಯಡ್ಡಿ ತಜ್ಞ ವೈದ್ಯರನ್ನು ಬಿಟ್ಟಿದ್ದಾರೆಂದೂ ಸುದ್ದಿ.
ಆಪರೇಶನ್ ಕಮಲ ಕಾರ್ಯಾಚರಣೆಯಿಂದ ಬಿಜೆಪಿಗೆ ಸಾಕಷ್ಟು ಅಪಖ್ಯಾತಿ ಬಂದಿದ್ದರೂ ಮತ್ತೆ ಅದೇ ಹುತ್ತಕ್ಕೆ ಕೈಹಾಕುವ ಚಪಲವನ್ನು ಯಡ್ಡಿ ಮತ್ತು ಸದಾನಂದ ಗೌಡ ಅಂಡ್ ಗ್ಯಾಂಗ್ ತೋರಿಸುತ್ತಿರುವುದು ಶೋಚನೀಯವಾಗಿದೆ. ಹಾಗಾಗಿ ಆಪರೇಶನ್ ಕಮಲ ಕಾರ್ಯಾಚರಣೆಗೆ ಹೊಸ ಹೆಸರು ಇಟ್ಟರೆ ಲೇಸೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. ಹೊಸ ಹೆಸರು ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. 1) ಆಪರೇಷನ್ ಕ್ಯಾಕ್ಟಸ್ 2) ಆಪರೇಶನ್ ಪಾಪಾಸುಕಳ್ಳಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications