ಶಿವಮೊಗ್ಗಕ್ಕೆ ಶೀಘ್ರ ರೆಡಿಮೇಡ್ ಗಾರ್ಮೆಂಟ್
ಶಿವಮೊಗ್ಗ, ಡಿ. 9 : ಶಿವಮೊಗ್ಗ ಸಮೀಪದ ನಿಧಿಗೆಯಲ್ಲಿ ಬೃಹತ್ ಸಿದ್ಧ ಉಡುಪು ತಯಾರಿಕಾ ಘಟಕ ಆರಂಭಿಸಲು ಸರ್ಕಾರದಿಂದ ಈಗಾಗಲೇ ಅನುಮತಿ ನೀಡಲಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ನೆಹರು ರಸ್ತೆಯಲ್ಲಿ ನೂತನ ಶಿವಪ್ಪನಾಯಕ ಮಾರುಕಟ್ಟೆ ನಿರ್ಮಾಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸಿದ್ಧ ಉಡುಪು ತಯಾರಿಕಾ ಘಟಕ ಆರಂಭಿಸಲು ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು, ಆರಂಭದ ಹಂತವಾಗಿ 550 ಕೋಟಿ ಬಂಡವಾಳ ಹೂಡಲಿದೆ. ಈ ಘಟಕದಲ್ಲಿ ಸುಮಾರು 10.000 ಜನರಿಗೆ ಉದ್ಯೋಗಾವಕಾಶ ದೊರಯಲಿದೆ. ಇವರಲ್ಲಿ ಶೇ.80ರಷ್ಟು ಮಹಿಳೆಯರಿಗೆ ಉದ್ಯೋಗ ಒದಗಿಸಿಕೊಡಲಾಗುವುದು ಎಂದರು.
ರಾಜ್ಯದ ಮಹಾನಗರಗಳ ಎಲ್ಲ ವಾರ್ಡ್‌ಗಳಲ್ಲಿ ರಚಿತವಾಗಿರುವ ಸ್ತ್ರೀ-ಶಕ್ತಿ ಗುಂಪುಗಳ ಮಹಿಳೆಯರು ಸಭೆ-ಸಮಾರಂಭ ನಡೆಸಲು ಹಾಗೂ ಸ್ವ ಉದ್ಯೋಗದ ತರಬೇತಿ ಪಡೆಯಲು ಅನುಕೂಲವಾಗುವಂತೆ ವಾರ್ಡಿಗೊಂದರಂತೆ ಸಮುದಾಯ ಭವನ ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಯಡಿಯೂರಪ್ಪ ಹೇಳಿದರು.
ನೂತನ ಶಿವಪ್ಪನಾಯಕ ಮಾರುಕಟ್ಟೆಯನ್ನು ಅಂತರ ರಾಷ್ಟ್ರೀಯ ಮಟ್ಟದ ವಾಣಿಜ್ಯ ಸಂಕೀರ್ಣವನ್ನಾಗಿ ನಿರ್ಮಿಸಲಾಗುತ್ತಿದ್ದು, ಅದಕ್ಕಾಗಿ 65 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಕಟ್ಟಡದ ಕಾಮಗಾರಿಯನ್ನು ಒಂದೂವರೆ ವರ್ಷದ ಅವಧಿಯೊಳಗೆ ಪೂರ್ಣಗೊಳಿಸಲು ಉದ್ಧೇಶಿಸಲಾಗಿದೆ ಎಂದ ಅವರು ಕಟ್ಟಡದಲ್ಲಿ ಅಗತ್ಯ ನಾಗರೀಕ ಸೌಲಭ್ಯ, 300 ಕಾರುಗಳು, 500 ದ್ವಿಚಕ್ರ ವಾಹನಗಳು, ಲಿಪ್ಟ್ ವ್ಯವಸ್ಥೆ ಹಾಗೂ ಅಗತ್ಯ ಸುರಕ್ಷತೆಯ ಕ್ರಮಗಳನ್ನು ಅಳವಡಿಸಲಾಗುವುದು ಎಂದರು.
50 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ತಾಳುಗುಪ್ಪ ರೈಲು ಗೇಜ್ ಪರಿವರ್ತನೆ, 350 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ಹರಿಹರ ರೈಲ್ವೇ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ 385 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿವೆ ಎಂದು ಅವರು ಒಂದುವರೆ ವರ್ಷದಲ್ಲಿ ತುಂಗಾ ಸೇತುವೆ ನಿರ್ಮಾಣ, 55 ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, 80 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ರಸ್ತೆ, ಕಛೇರಿ ಸಂಕೀರ್ಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications