ಸಮರ್ಥ ಮುಸ್ಲಿಮರು ಪಿಎಂ ಆಗ್ಬಹುದು, ರಾಹುಲ್

ಅಲೀಗಢ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್, ದೇಶವನ್ನಾಳುವ ಸಾಮರ್ಥ್ಯ ಯಾರಲ್ಲಿರುವುದೋ ಅವರು ಪಿಎಂ ಸ್ಥಾನಕ್ಕೆ ಅರ್ಹರು ಎಂದರು. ಧರ್ಮ ಅಥವಾ ಜನಾಂಗ ಇಲ್ಲಿ ಮುಖ್ಯವಲ್ಲ, ದೇಶದ ಏಳಿಗೆ, ಸಮಗ್ರತೆ ಕಾಯ್ದುಕೊಂಡು ಸಮರ್ಥ ಆಡಳಿತ ನೀಡುವುದೇ ಪ್ರಮುಖ ಸಂಗತಿ. ಮುಸ್ಲಿಮ್ ಭಾರತದ ಪ್ರಧಾನಮಂತ್ರಿ ಆಗಬಾರದು ಎಂಬ ನಿಯಮವೇನೂ ಇಲ್ಲ. ಸಾಮರ್ಥ್ಯವಿದ್ದರೆ ನಿಮ್ಮಲ್ಲಿ ಯಾರಾದರೂ ಆಗಬಹುದು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಆಕರ್ಷಿಸುವ ಕೆಲಸವನ್ನೂ ಸಹ ರಾಹುಲ್ ಮಾಡಿದರು.
ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮನಮೋಹನ್ ಸಿಂಗ್ ಒಬ್ಬ ಸಿಖ್ ಸಮುದಾಯದಿಂದ ಬಂದಿರುವ ಆಡಳಿತಗಾರ. ಅವರ ಅಡಳಿತ ವೈಖರಿ, ಅವರ ಸಾಮರ್ಥ್ಯ, ದೇಶವನ್ನು ಸಮರ್ಥವಾಗಿ ಕೊಂಡೊಯ್ಯುವ ಚಾಣಕ್ಷತನದಿಂದ ಅವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಭಾರತದಲ್ಲಿ ಸಿಖ್ ಸಮುದಾಯ ಕೆಲ ಪ್ರದೇಶಗಳಿಗೆ ಮಾತ್ರ ಸೀಮೀತವಾಗಿದೆ. ಆದರೂ ಅವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಮನಮೋಹನ್ ಸಿಂಗ್ ಭಾರತ ಕಂಡ ಅತ್ಯಂತ ಸಮರ್ಥ ಹಾಗೂ ಯಶಸ್ವಿ ಪ್ರಧಾನಮಂತ್ರಿಗಳಲ್ಲಿ ಸಿಂಗ್ ಕೂಡಾ ಒಬ್ಬರು ಎಂದು ರಾಹುಲ್ ಗಾಂಧಿ ಪ್ರಶಂಸಿಸಿದರು. ಮುಸ್ಲಿಂ ಯುವಕರು ರಾಜಕೀಯದ ಕಡೆಗೆ ಮುಖ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದರು.
(ಏಜನ್ಸೀಸ್)











Click it and Unblock the Notifications