ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ನಿಂದ ಮುಕ್ತಿ

ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ ವಿಭಾಗೀಯ ಪೀಠದ ತೀರ್ಪು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಭೀತಿ ಇತ್ತಾದರೂ ಇಂದು ಅಂತಿಮ ತೀರ್ಪು ನೀಡಿದ ನ್ಯಾಯಾಲಯ ಮೀಸಲು ಪರಿಷ್ಕರಣೆಗೆ ಕಾಲಾವಕಾಶ ನೀಡಿ ಚುನಾವಣೆಗೆ ಸಮ್ಮತಿಸಿದೆ.
ನ್ಯಾಯಮೂರ್ತಿ ವಿ ಗೋಪಾಲಗೌಡ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸರಕಾರದ ವಾರ್ಡ್ ಮೀಸಲನ್ನು ಪರಿಷ್ಕರಿಸಲು ಕಾಲಾವಕಾಶ ನೀಡಿದೆ. ಬಿಬಿಎಂಪಿಗೆ ಜನಪ್ರತಿನಿಧಿಗಳ ಆಡಳಿತ ಬರಬೇಕು ಎನ್ನುವುದು ಜನರ ಆಶಯವಾಗಿದೆ. ಇದರ ಜೊತೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದುದು ಸರಕಾರದ ಜವಾಬ್ದಾರಿ. ಈಗಾಗಲೇ ಪ್ರಕಟಿಸಿರುವ ಮೀಸಲಿನಲ್ಲಿ ನಿಯಾಮಾವಳಿಗಳನ್ನು ಪಾಲಿಸಿಲ್ಲ ಎಂದು ಪೀಠ ಆಕ್ಷೇಪಿಸಿದೆ.
ವಿಧಾನಸಭಾ ಕ್ಷೇತ್ರವಾರು ಮೀಸಲು ನಿಗದಿ ಮಾಡಿದ್ದು, ಕೆಲ ಗೊಂದಲಗಳಿವೆ ಎಂದು ಅರ್ಜಿದಾರರು ದೂರಿದ್ದರು. ಅರ್ಜಿದಾರರ ಪರ ರವಿವರ್ಮಕುಮಾರ್ ಅವರ ವಾದ-ವಿವಾದವನ್ನು ಆಲಿಸಿದ ಪೀಠ ಸಂವಿಧಾನದ ವಿಧಿ 243ಟಿ ಅನ್ವಯ ಮೀಸಲನ್ನು ನಿಗದಿ ಮಾಡುವಂತೆ ಸೂಚಿಸಿತು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications