'ಸಾವಿ'ನದುರ್ಗದಲ್ಲಿ ಯುವಪ್ರೇಮಿಗಳ ಆತ್ಮಹತ್ಯೆ

Somanna and Roopa of Magadi
ಮಾಗಡಿ, ಡಿ. 1 : ಹದಿನಾರು ತುಂಬದ ಬೆಂಗಳೂರಿನ ಎಸ್.ಜೆ.ಆರ್.ಸಿ.ಕಾಲೇಜಿನ ವಿದ್ಯಾರ್ಥಿನಿ ರೂಪಾ ಮತ್ತು 21ರ ಪ್ರಾಯದ ಖಾಸಗಿ ಕಂಪೆನಿ ಉದ್ಯೋಗಿ ಸೋಮಣ್ಣ ಪ್ರೇಮಪಾಶಕ್ಕೆ ಸಿಲುಕಿ ವಿರೋಧ ಎದುರಿಸಬೇಕೆಂಬ ಭಯದಿಂದ ಪ್ರೇಮಿಗಳು ವಿಷಸೇವಿಸಿ ಸಾವಿಗೀಡಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿಯ ಸಾವನದುರ್ಗದಲ್ಲಿ ನಡೆದಿದೆ. ಪ್ರೀತಿ ಪ್ರೇಮದ ಗುಂಗಿನಲ್ಲೇ ಇದ್ದ ರೂಪಾ ಮತ್ತು ಸೋಮು ತಮ್ಮ ಸಾವಿನ ಷರಾ ತಾವೇ ಬರೆದು ಹೆತ್ತ ಜೀವಗಳಿಗೆ ವಿದಾಯ ಹೇಳಿದ್ದಾರೆ.

ಮಾಗಡಿ ತಾಲ್ಲೂಕಿನ ಸಾವನದುರ್ಗ ದಟ್ಟ ಅರಣ್ಯದ ನಡುವೆ ಸುಂದರ ನೈಸರ್ಗಿಕ ತಾಣವಾಗಿದೆ. ಸಾಮಾನ್ಯವಾಗಿ ಪ್ರೇಮಿಗಳು ಏಕಾಂತ ಬಯಸಿ ಸಾವನದುರ್ಗ ಪ್ರದೇಶಕ್ಕೆ ಹೆಚ್ಚಾಗಿ ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾವನದುರ್ಗದ ವ್ಯಾಪ್ತಿಯಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿರುವುದರಿಂದ "ಸಾವಿ"ನದುರ್ಗವಾಗುತ್ತಿದೆ.

ಇದೇ ಸಾವನದುರ್ಗವನ್ನ ಹದಿಹರೆಯದ ಪ್ರೇಮದ ಹಕ್ಕಿಗಳಾದ ರೂಪಾ ಮತ್ತು ಸೋಮಣ್ಣ ಆತ್ಮಹತ್ಯೆಗೆ ಶರಣಾಗಲು ಆಯ್ಕೆ ಮಾಡಿಕೊಂಡ ಸ್ಥಳ. ಬೆಂಗಳೂರಿನ ಸುಂಕದಕಟ್ಟೆಯ ಸ್ಟೇಷನರಿ ಅಂಗಡಿ ಮಾಲೀಕ ಮುತ್ತಹನುಮಯ್ಯನವರ ಮಗಳು ರೂಪಾ ಎಸ್.ಜೆ.ಆರ್.ಸಿ ಕಾಲೇಜಿನಲ್ಲಿ ಪ್ರಥಮಿ ಪಿಯುಸಿ ವಿದ್ಯಾರ್ಥಿನಿ, ಮಾಗಡಿ ತಾಲ್ಲೂಕಿನ ದಬ್ಬಗುಳಿಯ ಬೈರಪ್ಪನ ಪುತ್ರ ಸೋಮಣ್ಣ ಕೂಡ ಬೆಂಗಳೂರಿನ ಟಾರಿಡ್ ಹಾರಿಮನ್ ಕಂಪೆನಿಯ ಉದ್ಯೋಗಿಯಾಗಿದ್ದ.

ಇಬ್ಬರೂ ಒಂದೇ ಜಾತಿಯ ಒಕ್ಕಲಿಗ ಜಾತಿಗೆ ಸೇರಿದವರಾಗಿದ್ದರೂ ತಮ್ಮ ಪ್ರೇಮಕ್ಕೆ ವಯಸ್ಸು ಮತ್ತು ಪೋಷಕರ ವಿರೋಧ ಎದುರಿಸಬೇಕಾಗಬಹುದೆಂಬ ಭಯದಿಂದ ಆತ್ಮಹತ್ಯೆಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಓದಿ ದೊಡ್ಡವಳಾಗುತ್ತಾಳೆಂಬ ಕನಸು ಹೊತ್ತಿದ್ದ ತಂದೆ ತಾಯಿಗೆ ರೂಪಾಳ ಪ್ರೀತಿ ಪ್ರೇಮದ ವಿಷಯ ತಿಳಿದೇ ಇರಲಿಲ್ಲ. ಆದರೆ ರೂಪಾ ಮತ್ತು ಸೋಮಣ್ಣನ ಆತ್ಮಹತ್ಯೆಯಿಂದ ಪ್ರೇಮದ ವಿಚಾರ ಗೊತ್ತಾಗಿದೆ.

ಹದಿನಾರು ತುಂಬದ ರೂಪಾಳನ್ನ ಇಷ್ಟಪಟ್ಟಿದ್ದ ಸೋಮಣ್ಣ ತಮ್ಮ ಮದುವೆಗೆ ವಯಸ್ಸು ಮತ್ತು ಪೋಷಕರು ಅಡ್ಡಿಬರಬಹುದೆಂಬ ಭಯದಿಂದ ಬೆಂಗಳೂರಿನಿಂದ ರೂಪಾಳನ್ನ ಸಾವನದುರ್ಗಕ್ಕೆ ಕರೆತಂದಿದ್ದಾನೆ. ಕಾಲೇಜಿಗೆ ಹೋಗಿದ್ದ ರೂಪಾಳನ್ನ ಹಾಗೆಯೇ ಸಾವನದುರ್ಗಕ್ಕೆ ಕರೆತಂದಿದ್ದಾನೆ. ಆತ್ಮಹತ್ಯೆಯ ನಿರ್ಧಾರವನ್ನ ಮೊದಲೇ ಮಾಡಿಕೊಂಡಿದ್ದ ರೂಪಾ ಮತ್ತು ಸೋಮಣ್ಣ ಸಾವನದುರ್ಗದ ಬೆಟ್ಟದ ಮೇಲಿನ ಕೆಂಪೇಗೌಡರ ಕೋಟೆಯ ಬಳಿ ಹೋಗಿ ಮೆಟಾಸಿಡ್ ವಿಷವನ್ನ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

''ನಮ್ಮ ಸಾವಿಗೆ ಯಾರೂ ಕಾರಣರಲ್ಲ. ನಮ್ಮ ಸಾವಿನಿಂದ ಪೋಲೀಸರು ಯಾರ ಮನೆಯವರಿಗೂ ತೊಂದರೆ ಕೊಡಬಾರದು. ನಾವು ಬದುಕಿನಲ್ಲಿ ಒಂದಾಗದಿದ್ದರೂ ಸಾವಿನಲ್ಲಿ ಒಂದಾಗಿದ್ದೇವೆ'' ಎಂದು ಡೆತ್‌ನೋಟ್ ಬರೆದು ಇಬ್ಬರೂ ಸಹಿ ಮಾಡಿದ್ದಾರೆ. ಬದುಕಿ ಬಾಳಬೇಕಾಗಿದ್ದ ಎರಡು ಎಳೆಯ ಜೀವಗಳು ಪ್ರೀತಿ ಪ್ರೇಮದ ಸುಳಿಯಲ್ಲಿ ಸಿಲುಕಿ ತಮ್ಮ ಬದುಕಿನ ಅಂತ್ಯವನ್ನ ಕಂಡುಕೊಂಡಿರುವುದು ದುರಂತ.

ಸಾವನದುರ್ಗ ಪ್ರದೇಶಕ್ಕೆ ವಾರಾಂತ್ಯಗಳಲ್ಲಿ ಹೆಚ್ಚಿನ ಮಂದಿ ಆಗಮಿಸುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಪೋಲೀಸ್ ಬಂಧೋಬಸ್ತ್‌ನ್ನ ನಿಯೋಜಿಸಲಾಗುವುದು. ಮತ್ತು ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನ ನಡೆಸಲು ಬರುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಸಿ.ಪಿ.ಐ ರಾಮಚಂದ್ರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+