ಸೇನಾ ಪುಂಡರ ದಾಳಿಗೆ ಐಬಿಎನ್ ಕಚೇರಿ ಧ್ವಂಸ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹತಾಶೆಗೊಂಡಿರುವ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಹಾಗೂ ಅವರ ಪಟಾಲಂ ಮಾಡಿರುವ ಅತ್ಯಂತ ಖಂಡನೀಯ ಕೆಲಸ. ಶಿವಸೇನೆಯ ಈ ಸಂವಿಧಾನ ವಿರೋಧ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಇತ್ತೀಚೆಗೆ ಸಮಾಜವಾದಿ ಪಕ್ಷ ಶಾಸಕ ಅಬು ಅಜ್ಮಿ, ವಿಧಾನಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಂಎನ್ಎಸ್ ರೌಡಿ ಎಂಎಲ್ಎಗಳು ಅಜ್ಮಿ ಅವರ ಮೇಲೆ ದಾಳಿ ನಡೆಸಿದ್ದರು. ಅದು ಕೂಡಾ ದೇಶವ್ಯಾಪಿ ಟೀಕೆಗೆ ಒಳಗಾಗಿತ್ತು.
ಅದಕ್ಕೂ ಮುಂಚೆ ಉತ್ತರ ಭಾರತದ ಕೆಲಸಗಾರರು ಮುಂಬೈನಲ್ಲಿ ಕೆಲಸ ಮಾಡಬಾರದು ಎಂದು ರಾಜ್ ಠಾಕ್ರೆ ಮತ್ತು ಬಾಳಾ ಠಾಕ್ರೆ ಅವರ ತಂಡ ದಾಳಿ ನಡೆಸಿ ಅವರನ್ನು ಮಹಾರಾಷ್ಟ್ರದಿಂದ ಓಡಿಸಿದ್ದು ಗೊತ್ತಿರುವ ಸಂಗತಿ. ಇತ್ತೀಚೆಗೆ ಕ್ರಿಕೆಟ್ ರಂಗದ ದಂತಕತೆ ಸಚಿನ್ ತೆಂಡೂಲ್ಕರ್ ಅವರು 'ಮೊದಲು ನಾನು ಭಾರತೀಯ, ನಂತರ ಮಹಾರಾಷ್ಟ್ರದವ' ಎಂದು ಹೇಳಿದ್ದಕ್ಕೆ ಬಾಳಾ ಠಾಕ್ರೆ ಟೀಕಿಸಿದ್ದರು. ಈ ಹಿಂದೆ ಬಾಲಿವುಡ್ ಅತ್ಯಂತ ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು ಬಿಟ್ಟು ಬಿಡದೆ ಎಂಎನ್ಎಸ್ ಪುಂಡರು ಕಾಟಕೊಟ್ಟಿದ್ದು ಗೊತ್ತೆ ಇದೆ. ಕರಣ್ ಜೋಹರ್ ನಿರ್ದೇಶನ ಹಿಂದಿ ಸಿನಿಮಾವೊಂದರಲ್ಲಿ ಮುಂಬೈಯನ್ನು ಬಾಂಬೆ ಎಂದು ತಪ್ಪಾಗಿ ಬಳಿಸಿದ್ದಕ್ಕೆ ಎಂಎನ್ಎಸ್ ಪುಂಡರು ಚಿತ್ರಮಂದಿರಕ್ಕೆ ದಾಳಿ ನಡೆಸಿ, ನಿರ್ದೇಶಕರಿಂದ ಕ್ಷಮಾಪಣೆ ಪಡೆದುಕೊಂಡು ಚಿತ್ರ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಶಿವಸೇನೆ ಮತ್ತು ಎಂಎನ್ಎಸ್ ನಾಯಕರ ಮತ್ತು ಕಾರ್ಯಕರ್ತರ ಕೃತ್ಯಗಳಿಗೆ ಕೊನೆ ಮೊದಲೆಂಬುದಿಲ್ಲ.
ಒಟ್ಟಿನಲ್ಲಿ ಇಂತಹ ಸಮಾಜ ವಿರೋಧಿ ಪ್ರಾಂತೀಯ ರಾಜಕೀಯ ಪಕ್ಷಗಳು, ಸಮಾಜದ ಶಾಂತಿ ಸೌಹಾರ್ದತೆಯನ್ನು ಕದಡುವ ರಾಜ್ ಠಾಕ್ರೆ ಅವರಂತಹ ರೌಡಿ ಸಂಘಟನೆಗಳು ಬೇಕೆ? ಅಬು ಅಜ್ಮಿ ಮೇಲೆ ದಾಳಿ ನಡೆಸಿದಾಗ ಎಂಎನ್ಎಸ್ ಪಕ್ಷವನ್ನು ನಿಷೇಧಿಸಬೇಕು ಎಂದು ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಪ್ರಾಂತ, ಭಾಷೆ ಇಟ್ಟುಕೊಂಡು ರಾಜಕೀಯ ಮಾಡುತ್ತಾ, ಆ ಮೂಲಕ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿರುವ ಇಂತಹ ಪಕ್ಷಗಳು ಬೇಡವೇ ಬೇಡ ಎನ್ನುವುದು ಎಲ್ಲರ ಒಕ್ಕೂರಲಿ ಮಾತಾಗಿದೆ.
ಘಟನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ದಾಳಿಕೋರರು ಎಷ್ಟೇ ಬಲಿಷ್ಠರಾದರೂ ಅವರಿಗೆ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ. ಮಾಧ್ಯಮಗಳ ಮೇಲೆ ಪದೆಪದೇ ದಾಳಿಗಳು ನಡೆಯುತ್ತಿವೆ. ಆಹಮದಾಬಾದಿನ ಎನ್ ಡಿಟಿವಿ ಕಚೇರಿ, ಬೆಂಗಳೂರಿನಲ್ಲಿ ಸ್ಟಾರ್ ಟಿವಿ ಕಚೇರಿ, ಕನ್ನಡದ ಚಾನೆಲ್ ಗಳು ಕೂಡಾ ಗೂಂಡಾಗಳ ದಾಳಿಗೆ ಒಳಗಾಗಿವೆ. ಈ ಘಟನೆ ಖಂಡಿಸಿ ನಾಳೆ ಮುಂಬೈಯಲ್ಲಿ ಎಲ್ಲ ಪತ್ರಕರ್ತರೂ ಶಾಂತಿಯುತ ಮೆರವಣಿಗೆ ಮಾಡುವುದಾಗಿ ಸಿಎನ್ಎನ್-ಐಬಿಎನ್ ರಾಷ್ಟ್ರೀಯ ಸಂಪಾದಕ ರಾಜ್ ದೀಪ್ ಸರದೇಸಾಯಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications