ಕೊನೆಗೊಂಡ ರಗಳೆ, ಯಡ್ಡಿ ರೆಡ್ಡಿ ಅಣ್ಣತಮ್ಮಂದಿರಂತೆ

ಸಂಪೂರ್ಣ ಪ್ರಕರಣವನ್ನು ಸುಷ್ಮಾ ಸ್ವರಾಜ್ ಯಶಸ್ವಿಯಾಗಿ ಶಾಂತಿಯುತವಾಗಿ ಮುಗಿಸಿದ್ದು ಈ ಹೈಡ್ರಾಮಾದ ಹೈಲೈಟ್. ಮುಖ್ಯಮಂತ್ರಿಯನ್ನು ತೆಗೆದು ಹಾಕಬೇಕು ಎಂದು ಪಟ್ಟು ಹಿಡಿದಿದ್ದ ಜನಾರ್ದನರೆಡ್ಡಿ ಅವರು, ನಮ್ಮ ತಾಯಿ ಸುಷ್ಮಾ ಸ್ವರಾಜ್ ಅವರ ಆದೇಶದಂತೆ ನಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದೇವೆ. ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಯಕತ್ವದಲ್ಲಿ ನಾವೆಲ್ಲರೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ರೆಡ್ಡಿ ಹೇಳಿದ್ದು ಕೂಡಾ ಅತಿ ಮಹತ್ವದ ಸಂಗತಿ. ಸುಷ್ಮಾ ಸ್ವರಾಜ್ ಅವರು ಯಡಿಯೂರಪ್ಪ ಮತ್ತು ರೆಡ್ಡಿಗಳ ಮಧ್ಯೆ ಇದ್ದ ಕಂದಕ ಹೇಗೆ ಹೋಗಲಾಡಿಸಿದರು ಎನ್ನುವುದು ನಿಗೂಢವಾಗಿದೆ.
ಕಳೆದ ವಾರದಿಂದ ಕಪ್ಪಿಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖ ಲಕಲಕ ಹೊಳೆಯತೊಡಗಿತ್ತು. ಮುಗುಳ್ನಗೆಯಿಂದಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಜನಾರ್ದನರೆಡ್ಡಿ, ಶ್ರೀರಾಮುಲು ಅವರು ಸಹಕರಿಸಿರುವುದು ನನಗೆ ಮತ್ತಷ್ಟು ಆನೆ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ತಪ್ಪು ಹೆಜ್ಜೆಗಳನ್ನಿಡದೆ, ಎಲ್ಲ ಶಾಸಕರ ಮತ್ತು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಭಾರ ಮಾಡುವುದಾಗಿ ಹೇಳಿದರು.
ಕರ್ನಾಟಕದ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಜನಾರ್ದನರೆಡ್ಡಿ ಅವರ ನಡುವೆ ಉಂಟಾಗಿದ್ದ ಬಿಕ್ಕಟ್ಟು ಶಮನವಾಗಿದೆ. ಇನ್ನು ಮುಂದೆ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು.
ಹಿರಿಯ ನಾಯಕ ಎಲ್ ಕೆ ಅಡ್ವಾಣಿ ನಿವಾಸದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಕ್ಕಟ್ಟು ಶಮನಗೊಂಡಿದೆ. ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದಿದ್ದು ನಿಜ. ಅವುಗಳನ್ನು ಬಗೆಹರಿಸಿರುವುದಾಗಿ ಹೇಳಿದರು. ಅಡ್ವಾಣಿ ಹುಟ್ಟುಹಬ್ಬದ ದಿನದಂದು ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರಕಾರದಲ್ಲಿ ಉಂಟಾಗಿದ್ದ ಗೊಂದಲವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.
ಆದರೆ, ಸಂಪುಟದಿಂದ 6 ಮಂದಿ ಸಚಿವರನ್ನು ಕೈಬಿಡುವಂತೆ ರೆಡ್ಡಿ ಪಟ್ಟಿಗೆ ಶೋಭಾ ಕರಂದ್ಲಾಜೆ ಸೇರಿದಂತೆ ನಾಲ್ಕು ಸಚಿವರನ್ನು ಕೈಬಿಡಲು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ನಾಲ್ಕು ಮಂದಿ ಸಚಿವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ರೆಡ್ಡಿ ಯಡ್ಡಿ ಒಂದಾದರೂ ನಾವು ನಮ್ಮ ಪಟ್ಟನ್ನು ಬಿಡಲ್ಲ ಎಂದು ಹೇಳಿದ್ದ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರ ನಡೆ ಏನು ? ಮುಖ್ಯಮಂತ್ರಿ ವಿರುದ್ದ ಬಹಿರಂಗ ಸೆಡ್ಡು ಹೊಡೆದಿದ್ದ ರೇಣುಕಾಚಾರ್ಯ ಮತ್ತವರ ಗ್ಯಾಂಗ್ ಏನು ಮಾಡಲಿದೆಯೋ ಎನ್ನುವುದು ಸ್ಪಷ್ಟವಾಗಬೇಕಿದೆ. ಇತ್ತೀಚಿನ ವರದಿಗಳ ಪ್ರಕಾರ, ಹೈದರಾಬಾದ್ ನಲ್ಲಿ ಬೀಡುಬಿಟ್ಟಿರುವ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ಹೇಳಿದ್ದಾರೆ !!
ಸಿ ಎಸ್ ಉದಾಸಿ, ಮುರುಗೇಶ ನಿರಾಣಿ, ಲಕ್ಷ್ಮಣ ಸವದಿ, ಶೋಭಾ ಕರಂದ್ಲಾಜೆ, ಹರತಾಳು ಹಾಲಪ್ಪ, ಬಸವರಾಜ ಬೊಮ್ಮಾಯಿ ಅವರ ತಲೆದಂಡವಾಗಬೇಕು. ಯಡಿಯೂರಪ್ಪ 6 ತಿಂಗಳ ಮಾತ್ರ ಹುದ್ದೆಯಲ್ಲಿದ್ದು ಬಜೆಟ್ ನಂತರ ಕೆಳಗಿಳಿಯಬೇಕು. ಸಮನ್ವಯ ಸಮಿತಿ ರಚನೆಯಾಗಿ ಯಾವುದೇ ವರ್ಗಾವಣೆ ಯೋಜನೆ ರೂಪಿಸುವಾಗಲೂ ಅದರ ಅನುಮತಿ ಪಡೆಯುವುದು ಕಡ್ಡಾಯ. ಮುಖ್ಯಮಂತ್ರಿ ಸ್ವತಂತ್ರವಾಗಿ ಯಾವುದೇ ನಿರ್ಧಾರವನ್ನೂ ತಗೆದುಕೊಳ್ಳುವಂತಿಲ್ಲ.
ಉಪಚುನಾವಣೆಯಲ್ಲಿ ಸೋತ ಸೋಮಣ್ಣ ರಾಜೀನಾಮೆಯಿಂದ ಖಾಲಿ ಆದ ಸ್ಥಾನಕ್ಕೆ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರನ್ನೇ ನೇಮಕ ಮಾಡಬೇಕು.ತಮ್ಮ ಬೆಂಬಲಿಗ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು. ಪ್ರತಿ ತಿಂಗಳ ಶಾಸಕರ ಸಭೆ, ಕ್ಷೇತ್ರವಾರು ಹಣ ಸಮಾನ ವಿಂಗಡಣೆ. ನಿಗಮ ಮಂಡಳಿಗಳಲ್ಲಿ ಶೇ. 50 ರಷ್ಟು ಸ್ಥಾನಗಳನ್ನು ತಮ್ಮ ಬೆಂಬಲಿಗರಿಗೆ ನೀಡಬೇಕು ಎನ್ನುವ ರೆಡ್ಡಿಗಳ ಬೇಡಿಕೆಗಳು ಬಹುತೇಕ ಈಡೇರುವ ಸಾಧ್ಯತೆಗಳಿವೆ.
ಕರ್ನಾಟಕದ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದ ಸುಷ್ಮಾ ಅವರಿಗೆ ರಾಜ್ಯ ಉಸ್ತುವಾರಿ ನೀಡಲು ಹೈಕಮಾಂಡ್ ನೀಡಲು ತೀರ್ಮಾನಿಸಿದೆ. ಆದರೆ, ಒಂದು ಗಮನಿಸಬೇಕಾದ ಸಂಗತಿಯೆಂದರೆ ತಾಯಿ ಸುಷ್ಮಾ ಸ್ವರಾಜ್ ಅವರ ಆದೇಶವನ್ನು ಪರಿಪಾಲಿಸಿದ್ದೇವೆ ಎಂದಿದ್ದಾರೆ. ಕರ್ನಾಟಕದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಿಜೆಪಿ ಹೈಕಮಾಂಡ್ ಸಂಪೂರ್ಣ ವಿಫಲವಾಗಿರುವುದಂತೂ ಅತ್ಯಂತ ಸ್ಪಷ್ಟವಾಗಿದೆ. ಸುಷ್ಮಾ ಸ್ವರಾಜ್ ಮತ್ತು ರೆಡ್ಡಿಗಳ ನಡುವೆ ಇರುವ ಭಾವನಾತ್ಮಕ ಸಂಬಂಧ ಇಲ್ಲಿ ಕೆಲಸ ಮಾಡಿದೆ ಎಂದು ಸ್ಪಷ್ಟವಾಗಿ ಹೇಳಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications