ಅನಕ್ಷರತೆ ನಿರ್ಮೂಲನೆಯಿಂದ ಸುಧಾರಣೆ ಸಾಧ್ಯ
ಬೆಂಗಳೂರು, ನ. 4 : ಅನಕ್ಷರತೆ ನಿರ್ಮೂಲನೆಯಿಂದ ಮಾತ್ರ ಅಲ್ಪಸಂಖ್ಯಾತರ ಸುಧಾರಣೆ ಮಾತ್ರ ಸಾಧ್ಯ ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಲ್ಹಾಜ್ ಖಸ್ರ್ರೋ ಖುರೇಶಿ ಅವರು ಹೇಳಿದರು.
ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತರಿಗೆ ಅರಿವು ಮೂಡಿಸುವ ಶಿಬಿರವನ್ನು ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅಲ್ಪಸಂಖ್ಯಾತರ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಗಮನ ನೀಡುತ್ತಿದೆ. ಆದರೆ ಅನಕ್ಷರತೆಯಿಂದ ಈ ಯೋಜನೆಗಳು ಹಾಗೂ ಸವಲತ್ತುಗಳು ಬಡಜನತೆಯನ್ನು ನಿರೀಕ್ಷಿತಮಟ್ಟದಲ್ಲಿ ತಲುಪುತ್ತಿಲ್ಲ ಎಂದರು.
ಅಲ್ಪಸಂಖ್ಯಾತರಲ್ಲಿ ಬಹುಪಾಲು ಮುಸ್ಲಿಮರು ಇದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ಮುಸ್ಲಿಂ ಬಾಂಧವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸದೆ ದುಡಿಯಲು ಕಳುಹಿಸುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಕುರಿತು ಸ್ಥಳೀಯವಾಗಿ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರನ್ನು ಹುರಿದುಂಬಿಸಲಾಗುತ್ತಿದೆ. ಓದು ಬರಹ ಕಲಿಯದ ಮಕ್ಕಳನ್ನು ಸಮಾಜದಲ್ಲಿ ದುಷ್ಕತ್ಯಗಳಿಗೆ ಬಳಸಿಕೊಳ್ಳುತ್ತಿದ್ದು ಇದರಿಂದ ಅವರ ಭವಿಷ್ಯ ಕುಂಠಿತವಾಗುವುದಲ್ಲದೇ ಸಮಾಜಘಾತುಕ ಶಕ್ತಿಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.
ಮದರಸಗಳಲ್ಲಿ ಧರ್ಮೋಪದೇಶ ಮಾತ್ರವಲ್ಲದೆ ಶಿಕ್ಷಣವನ್ನು ನೀಡಬೇಕೆಂದು ಅವರು ಮನವಿ ಮಾಡಿದರು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಬಡವರಿಗೆ ತಲುಪುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕೆಂದ ಅವರು, ಸರ್ಕಾರಕ್ಕೆ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದರು. ಸ್ವಯಂಸೇವಾ ಸಂಘಗಳು ಯೋಜನೆಗಳು ಫಲಾನುಭವಿಗಳನ್ನು ತಲುಪುವ ಬಗ್ಗೆ ತೀವ್ರ ನಿಗಾವಹಿಸಿ ಗಮನವಹಿಸಬೇಕಾಗಿದೆ ಹಾಗೂ ಈ ನಿಟ್ಟಿನಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications