ಧಾರವಾಡ ಕೊಂಡವಾಡ ಸ್ಥಳಾಂತರಕ್ಕೆ ಶಂಕುಸ್ಥಾಪನೆ

ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ವಿಧಾನಸಭಾ ಅಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಪಾಲ್ಗೊಂಡಿದ್ದರು. ಪುನರ್ವಸತಿ ಕಲ್ಪಿಸಲಾಗುವ ಗ್ರಾಮದಲ್ಲಿ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಮಾತ್ರವಲ್ಲ ಅಗತ್ಯವಾದ ಶಾಲೆ, ನೀರು, ರಸ್ತೆ, ಅಂಗನವಾಡಿ, ವಿದ್ಯುತ್, ಆಸ್ಪತ್ರೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಗ್ರಾಮಗಳ ಜನರಿಗೆ 1 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಕೊಪ್ಪಳದಲ್ಲಿ ಹೇಳಿದ್ದರು. ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಏರ್ಪಡಿಸಲಾಗಿದ್ದ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದರು.
ಪ್ರವಾಹದಿಂದ ಪದೇ ಪದೇ ಮುಳುಗಡೆ ಭೀತಿ ಎದುರಿಸುತ್ತಿರುವ ಗ್ರಾಮಗಳ ಜನರಿಗೆ ಸುರಕ್ಷಿತ ಮತ್ತು ಶಾಶ್ವತವಾಗಿ ಮನೆಗಳನ್ನು ನಿರ್ಮಿಸಲು ಸರ್ಕಾರ ಯೋಜಿಸಿದ್ದು, ಇದಕ್ಕಾಗಿ 1 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಸೇರಿದಂತೆ ಶಾಲೆ, ಅಂಗನವಾಡಿ ಕೇಂದ್ರ, ರಸ್ತೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಮುಂತಾದ ಸೌಕರ್ಯಗಳನ್ನು ಒದಗಿಸಲಾಗುವುದು. ಅದೊಂದು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲಾಗುವುದು ಎಂದು ಅವರು ವಿವರಿಸಿದರು.
ಪ್ರವಾಹಭೀತಿ ಎದುರಿಸುವ ಗ್ರಾಮಗಳನ್ನು ಸ್ಥಳಾಂತರಿಸಿ, ಹೊಸ ಊರು ನಿರ್ಮಿಸಲು ಬೇಕಾದ ಜಮೀನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಉದ್ದೇಶಕ್ಕಾಗಿ ರೈತರು ನೀಡುವ ಜಮೀನಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಜಮೀನು ಮಾಲೀಕನಿಗೂ 1 ಲಕ್ಷ ರೂ. ವೆಚ್ಚದಲ್ಲಿ ಸ್ಥಳಾಂತರಿತ ಗ್ರಾಮದಲ್ಲಿ ಮನೆ ಕಟ್ಟಿಸಿಕೊಡಲಾಗುವುದು. ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸುವ ಗ್ರಾಮಗಳಿಗಾಗಿ 1 ತಿಂಗಳ ಒಳಗಾಗಿ ಭೂಸ್ವಾಧೀನ ಕಾರ್ಯವನ್ನು ಜರುಗಿಸಬೇಕು. ಮುಂದಿನ ಮಾರ್ಚ್ ತಿಂಗಳ ಒಳಗೆ ಪ್ರವಾಹ ಸಂತ್ರಸ್ತರು ನೂತನ ಮನೆಯಲ್ಲಿ ವಾಸಿಸುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಛತ್ತೀಸ್‌ಗಢ ರಾಜ್ಯದಿಂದ ಪ್ರವಾಹ ಸಂತ್ರಸ್ತರಿಗಾಗಿ ಅಕ್ಕಿ ಆಗಮಿಸುತ್ತಿದ್ದು, ಪ್ರವಾಹ ಸಂಕಷ್ಟಕ್ಕೆ ಸಿಲುಕಿದ ಪ್ರತಿ ಕುಟುಂಬಕ್ಕೆ ತಲಾ 20 ಕೆ.ಜಿ. ಯಂತೆ ಅಕ್ಕಿ ವಿತರಿಸಲಾಗುವುದು. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರ ಹೆಸರಿನಲ್ಲಿ, ಪರಿಹಾರ ಧನವನ್ನು ಪಡೆಯುವ ಅನರ್ಹರನ್ನು ಜೈಲಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅತಿವೃಷ್ಠಿಯಿಂದ ಹಾನಿಯಾಗಿರುವ ತೋಟಗಾರಿಕೆ ಬೆಳೆಗಳಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications