ಪ್ರವಾಹ ಪೀಡಿತ ಪ್ರದೇಶಕ್ಕೆ 100 ಕೋ ಪರಿಹಾರ

ಮುನಿಸಿಕೊಂಡ ವರುಣನ ಆರ್ಭಟಕ್ಕೆ ರಾಜ್ಯ ಸರಕಾರ ಕೂಡಾ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಸುತ್ತೂರುಮಠದಲ್ಲಿ ಮೂರು ದಿನಗಳ ಸಹಚಿಂತನ ಶಿಬಿರದಲ್ಲಿ ಯೋಗ ಹಾಗೂ ವ್ಯಾಯಾಮದ ಮೂಲಕ ಉಲ್ಲಾಸಿತರಾಗಿರುವ ರಾಜ್ಯ ಸರಕಾರ ಇಂದು ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿತು. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಕ್ಕೆ ತಕ್ಷಣ 100 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗಾಗಲೇ 150 ಕೋಟಿ ರುಪಾಯಿ ಪ್ರಕೃತಿ ವಿಕೋಪ ನಿಧಿಯಲ್ಲಿದೆ. ಅದನ್ನು ಹೊರತುಪಡಿಸಿ 100 ಕೋಟಿ ರುಪಾಯಿಗಳನ್ನು ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನೆರೆಯಲ್ಲಿ ಸಿಕ್ಕಿರುವ ಜನರ ರಕ್ಷಣೆಗೆ ಸರಕಾರ ಈಗಾಗಲೇ ಕ್ರಮಕೈಗೊಳ್ಳಲಾಗಿದ್ದು, 10 ಹೆಲಿಕ್ಯಾಪ್ಟರ್ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಸ್ಥಳಗಳಿಗೆ ರವಾನಿಸಲಾಗಿದೆ. ರಾಷ್ಟ್ರೀಯ ವಿಕೋಪ ಪರಿಹಾರ ತಂಡ, ಸೇನೆ ತಂಡ, ನೌಕಾ ಪಡೆ ಹಾಗೂ ಪೊಲೀಸರ ಮೂಲಕ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಕಾರ್ಯ ಮುಂದುವರೆದಿದೆ. ಇಂದು ಹಾವೇರಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗುವುದು. ಅಕ್ಟೋಬರ್ 4 ರಂದು ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ನೆರ ಹಾವಳಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯದ ಉಸ್ತುವಾರಿಯನ್ನು ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ಎಂ ಎನ್ ಜಾಮದಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನೆರೆಯ ಸಂಪೂರ್ಣ ವರದಿ ಬಂದ ನಂತರ ಹಣಕಾಸಿನ ಸಹಾಯಕ್ಕೆ ಕೇಂದ್ರ ಸರಕಾರದ ಮೋರೆ ಹೋಗಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗಂಜೀ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ರಾಜ್ಯದ ಬಸ್ ಹಾಗೂ ರೈಲ್ವೆ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ ಎಚ್ ಮುನಿಯಪ್ಪ ಕೂಡಾ ಕೇಂದ್ರದ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದು, ಸಾಧ್ಯವಾದ ಮಟ್ಟಿಗೆ ಕೇಂದ್ರದಿಂದ ಹಣಕಾಸಿನ ನೆರವಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications