ಉ.ಕದಲ್ಲಿ ಅಬ್ಬರಿಸಿದ ವರುಣ : 22 ಸಾವು

Heavy rain claims 22 lives in North Karnataka
ಬೆಂಗಳೂರು, ಸೆ. 30 : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಯಂಕರ ಮಳೆಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೀರಿನಿಂದ ಜಲಾವೃತವಾಗಿದ್ದು, ಜಿಲ್ಲೆಗಳ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ವಿಜಾಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಗದಗ, ಗುಲ್ಬರ್ಗಾ ಮತ್ತು ಹಾವೇರಿಯಲ್ಲಿ ವರುಣ ಆರ್ಭಟ ಹೇಳತೀರದಾಗಿದೆ. ಈಗಾಗಲೇ 22 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಕೋಟ್ಯಂತರ ರುಪಾಯಿಗಳಷ್ಟು ನಷ್ಟವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆಯಾ ಜಿಲ್ಲಾಡಳಿತ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯವನ್ನು ಆರಂಭಿಸಿವೆ.

ಭೀಕರ ಮಳೆಗೆ ಮನೆ ಕುಸಿದ ಪರಿಣಾಮ ಬಿಜಾಪುರ ಜಿಲ್ಲೆಯೊಂದರಲ್ಲೇ ಮೂರು ಮಹಿಳೆಯರು, ನಾಲ್ಕು ಮಕ್ಕಳು ಸೇರಿದಂತೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. ಶಾಲೆಗೆ ಹೋಗುತ್ತಿದ್ದ ಬಾಲಕಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ದುರ್ಘಟನೆಯೂ ನಡೆದಿದೆ. ಬಿಜಾಪುರ ನಗರದ ವಡ್ಡರ ಓಣಿಯಲ್ಲಿ ಗೋಡೆ ಕುಸಿದು ಪ್ರಕಾಶ್ (30) ಎಂಬುವವರು ಮೃತಪಟ್ಟಿದ್ದಾರೆ. ಆಲಮೇಲು ಠಾಣೆ ವ್ಯಾಪ್ತಿಯ ಮಠದ ಹಳ್ಳಿಯಲ್ಲಿ ಮನೆಯ ಛಾವಣಿ ಕುಸಿದು 7 ವರ್ಷದ ಬಾಲಕ ಅಸುನೀಗಿದ್ದರೆ, ಇತರೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಅಕ್ಕಪಕ್ಕದಲ್ಲಿ ಮಲಗಿದ್ದ ನಾಲ್ವರು ಪಾರಾಗಿದ್ದಾರೆ.

ಬಾಗೇವಾಡಿ ಠಾಣೆ ವ್ಯಾಪ್ತಿಯಲ್ಲಿ ಅಂದರಗಿ ಗ್ರಾಮದ ಬಳಿ ಮಂಗಲವಾರ ಶಾಲೆಯಿಂದ ಮನೆಗೆ ಬರುತ್ತಿದ್ದ ಮಾದೇವಿ (12) ಕಾಲು ಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಸತತ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಆದರೆ, ಇಂದು ಬೆಳಗ್ಗೆ ಶವವನ್ನು ಪತ್ತೆ ಹಚ್ಚಲಾಗಿದೆ. ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ಕುಸಿದಿವೆ. ಮೃತಪಟ್ಟವರಿಗೆ ತಲಾ ಒಂದು ಲಕ್ಷ ರುಪಾಯಿ ಪರಿಹಾರವನ್ನು ಘೋಷಿಸಲಾಗಿದೆ.

ಗುಲ್ಬರ್ಗಾದ ಚಿಂಚೋಳಿ ಠಾಣೆ ವ್ಯಾಪ್ತಿಯ ಎಂಪಳ್ಳಿ ಗ್ರಾಮದ ಬಳಿ ಲಕ್ಕಪ್ಪ ನಾಲೆ ದಾಟುತ್ತಿದ್ದ ಕೂಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹನುಮವ್ವ (28) ಮತ್ತು ಅಂಬಿಕಾ (18) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಸುರಪುರ ತಾಲ್ಲೂಕಿನ ಹುಣಸಗಿ ಬಳಿ ನಾಲೆಯಲ್ಲಿ ರೈತನೊಬ್ಬ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸೋಮಪ್ಪ (48) ಮೃತ ರೈತನಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಮಳೆಯಲ್ಲಿ ತೋಯ್ದ ಬೆಳಗಾವಿ, ರಾಯಚೂರು
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುರಕುಂಟದಲ್ಲಿ ಭಾರಿ ಮಳೆಗೆ ವಿದ್ಯುತ್ ಕಂಬ ಬಿದ್ದು ಸಿದ್ದಪ್ಪ (30) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 100 ಮನೆಗಳು ಕುಸಿದು ಬಿದ್ದಿವೆ. ಗರಗ, ಅಮ್ಮಿನಭಾವಿಯಲ್ಲಿ ಭಾರಿ ಮಳೆ ಬಿದ್ದು ಅಪಾರ ನಷ್ಟ ಉಂಟಾಗಿದೆ.

ಬೆಳಗಾವಿಯಲ್ಲಿ ಕಳೆದ ರಾತ್ರಿ ಆರಂಭವಾದ ಮಳೆಗೆ ಇಂದು ಬೆಳಗಿನ ಜಾವದವರೆಗೂ ಧಾರಾಕಾರವಾಗಿ ಸುರಿದಿದ್ದು, ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಗೋಕಾಕ ಬಳಿ ವಿದ್ಯುತ್ ತಂತಿ ಸ್ಪರ್ಷಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಈ ಇಬ್ಬರು ಅಸುನೀಗಿದ್ದಾರೆ. 50ಕ್ಕೊ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.

ಕೊಪ್ಪಳ ಜಿಲ್ಲೆಯಲ್ಲಿ ವರುಣನ ಅವಕೃಪೆಗೆ ಸಾವು ನೋವುಗಳು ಸಂಭವಿಸಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜಿಲ್ಲೆಯ ಕುಷ್ಠಗಿ ತಾಲ್ಲೂಕಿನ ಹನುಮಸಾಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಕುಸಿದು ಮಹಿಳೆ ಮತ್ತು ಶಿವಕುಮಾರ ಎಂಬುವವರು ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+