ಸಕ್ಕರೆಬೈಲಿನ ಆನೆ ಬಿಡಾರದ ಕೊನೆಯ ದಿನಗಳು

ಶಿವಮೊಗ್ಗದಿಂದ ಕೇವಲ 14 ಕಿ.ಮೀ. ದೂರವಿರುವ ಸಕ್ಕರೆಬೈಲನ್ನು, ಆನೆಗಳನ್ನು ಪಳಗಿಸಲೆಂದೇ ಹಾಗೂ ಪಳಗಿಸಿದ ಆನೆಗಳನ್ನು ಸರ್ಕಾರಿ ಕೆಲಸಗಳಿಗಾಗಿ ಬಳಸಿಕೊಳ್ಳಲೆಂದೇ ಬ್ರಿಟೀಷರು ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಸಕ್ಕರೆಬೈಲು ಆನೆಗಳ ಪಾಠಶಾಲೆ ಎಂದೇ ಜಗತ್ತಿನಾದ್ಯಂತ ಪ್ರಸಿದ್ಧಗೊಂಡಿತ್ತು. ಮೊದಮೊದಲು ಬ್ರಿಟೀಷರು ಈ ಪಾಠಶಾಲೆಯನ್ನು ಆರಂಭಿಸಿದ್ದು ಭದ್ರಾ ಹಿನ್ನೀರಿನ ಪ್ರದೇಶವಾದ ಲಕ್ಕವಳ್ಳಿ ಬಳಿಯಲ್ಲಿ. ಆನಂತರದಲ್ಲಿ ಅಲ್ಲಿನ ಸ್ಥಳದ ಸಮಸ್ಯೆಯಿಂದಾಗಿ ಸಕ್ಕರೆಬೈಲನ್ನು ಆನೆಗಳ ಪಾಠಶಾಲೆಯಾಗಿ ಗುರುತಿಸಿಕೊಂಡರು.
ಆರಂಭದಲ್ಲಿ ಬ್ರಿಟೀಷರು ಕಾಡಿನ ಆನೆಗಳನ್ನು ಖೆಡ್ಡಾದಲ್ಲಿ ಕೆಡವಿ ನಂತರ ಈ ಆನೆಗಳನ್ನು ಸಕ್ಕರೆಬೈಲಿನ ಪಾಠಶಾಲೆಗೆ ಒಯ್ಯುತ್ತಿದ್ದರು. ತಿಂಗಳು ಗಟ್ಟಲೆ ಈ ಕಾಡಾನೆಗಳನ್ನು ಪಳಗಿಸಿದ ಆನೆಯಾಗಿಸಿ ಕಾಡಿನ ಮರಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಲು ಬಳಸುತ್ತಿದ್ದರು. ಸ್ವಾತಂತ್ರ್ಯ ನಂತರದಲ್ಲಿ ಕಾಡಿನಿಂದ ಆನೆಗಳನ್ನು ಖೆಡ್ಡಾದಲ್ಲಿ ಕೆಡವುವ ಪರಿಪಾಠ ಕಡಿಮೆಯಾಗುತ್ತಾ ಬಂತು. ಊರಿಗೆ ನುಗ್ಗಿ ದಾಂಧಲೆ ಮಾಡುವ, ನರ ಹತ್ಯೆಗಳನ್ನು ಮಾಡುವ ಅಥವಾ ಯಾವುದೋ ತೊಂದರೆಗೆ ಸಿಕ್ಕಿ ಕಾಡಿನಲ್ಲಿ ಬದುಕಲಾರದ ಆನೆಗಳನ್ನು ಊರಿನ ಆನೆಗಳ ಸಹಾಯದಿಂದ ಸಕ್ಕರೆಬೈಲಿಗೆ ತರುವ ಪರಿಪಾಠ ಬೆಳೆಯಿತು. ಈಗಲೂ ಇದು ಮುಂದುವರೆದಿದೆ.
ಸಕ್ಕರೆಬೈಲಿನಿಂದ ಆನೆಬಿಡಾರವನ್ನು ಸ್ಥಳಾಂತರಿಸಬೇಕೆಂಬ ಮಾತು ಕಳೆದ 10 ವರ್ಷಗಳಿಂದ ಕೇಳಿ ಬರುತ್ತಿತ್ತು. ಸಕ್ಕರೆಬೈಲು ಮೊದಲಿನಂತೆ ಕೇವಲ ಕಾಡಿನ ಪ್ರದೇಶವಾಗಿ ಉಳಿದಿಲ್ಲ ಎಂಬುದು ಪ್ರಮುಖ ಕಾರಣವಾಗಿದ್ದರೂ, ತುಂಗಾ ಅಣೆಕಟ್ಟನ್ನು ಎತ್ತರಗೊಳಿಸಿದ್ದರಿಂದ ಹಿನ್ನೀರಿನ ಪ್ರಮಾಣ ಹೆಚ್ಚಾಗಿದ್ದು, ಇದು ಈ ನೀರನ್ನೇ ನಂಬಿಕೊಂಡಿರುವ ಸಾಕು ಆನೆಗಳ ಪ್ರಾಣಕ್ಕೆ ತೊಂದರೆ ಇದೆ ಎಂಬುದು ಇಲಾಖೆಯ ಲೆಕ್ಕಾಚಾರ.
ಈ ಎಲ್ಲಾ ಕಾರಣಗಳನ್ನು ಒಗ್ಗೂಡಿಸಿಕೊಂಡು ಅರಣ್ಯ ಇಲಾಖೆ ಇದೀಗ ಸಕ್ಕರೆಬೈಲಿನ ಪ್ರದೇಶಕ್ಕಿಂತ ವಿಶಾಲವಾಗಿರುವ ಸ್ಥಳವೊಂದನ್ನು ತುಂಗಾ ನದಿಯ ಹಿನ್ನೀರಿನ ಬಳಿಯಲ್ಲಿ ಗುರುತಿಸಿದೆ. ಈಗಾಗಲೇ ಆನೆ ಬಿಡಾರಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಇಲಾಖೆ ಟೆಂಡರ್ ಪ್ರಕ್ರಿಯೆ ಮುಗಿಸಿಕೊಂಡಿದ್ದು, 12 ಲಕ್ಷ ರೂ.ಗಳ ವೆಚ್ಚದಲ್ಲಿ ಅಶ್ವಿನಿ ವನದ ಎದುರಿನಲ್ಲಿ ಆನೆಗಳ ಪಾಠಶಾಲೆಯ ಕಾಮಗಾರಿಯನ್ನು ಆರಂಭಿಸಿದೆ. ಜೂನ್ 15ರೊಳಗೆ ಆನೆ ಬಿಡಾರದ ಸಿದ್ಧತಾ ಕಾರ್ಯ ಮುಗಿಸುವ ಸೂಚನೆಯನ್ನು ಟೆಂಡರ್‌ದಾರರಿಗೆ ವನ್ಯಜೀವಿ ಇಲಾಖೆ ನೀಡಿದೆ. ಆನೆ ಬಿಡಾರದ ಕಾಮಗಾರಿ ಮುಗಿಯುತ್ತಿದ್ದಂತೆ ಸಕ್ಕರೆಬೈಲಿನ ಆನೆಗಳನ್ನು ಈ ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ದಿನಾಂಕ ನಿಗದಿಯಾಗಲಿದೆ.












Click it and Unblock the Notifications