ಇಬ್ಬರ ಜಗಳದಲಿ ಬಡವಾದ ಚಿಕ್ಕಮಂಡ್ಯ ಹಳ್ಳಿಕೇಶ್ವರ

Chikkamandya Hallikeshwara temple
ದೇವರು ಎಲ್ಲೆಡೆ ಇರುತ್ತಾನೆಂದು ಎಲ್ಲರೂ ನಂಬುತ್ತಾರೆ, ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸದಿದ್ದರೆ ಭಕುತರಿಗೆ ಸಮಾಧಾನವಿರುವುದಿಲ್ಲ. ಆದರೆ, ಚಿಕ್ಕಮಂಡ್ಯ ಗ್ರಾಮದಲ್ಲಿ ಒಳಜಗಳದಿಂದಾಗಿ ಹಳ್ಳಿಕೇಶ್ವರದೇವಸ್ಥಾನಕ್ಕೆ ಬೀಗಜಡಿದು, ಭಕ್ತಗಣಕ್ಕೆ ದೇವರ ದರುಷನವಾಗದಂತೆ ಮಾಡಲಾಗಿದೆ. ಇಬ್ಬರ ಜಗಳದಲ್ಲಿ ಪೂಜೆ ಪುನಸ್ಕಾರವಿಲ್ಲದೆ ದೇವರು ಬಡವಾಗುತ್ತಿದ್ದಾನೆ. ಮೇ 10ರಂದು ಸಭೆ ಸೇರಿಸಲಾಗಿತ್ತಾದರೂ ಸಂಧಾನ ಕಾರ್ಯ ಮುಂದುವರಿದಿದೆ.

* ಉಮೇಶ್, ಮಂಡ್ಯ

ಮಂಡ್ಯ, ಮೇ. 11 : ಇಲ್ಲಿನ ಚಿಕ್ಕಮಂಡ್ಯ ಗ್ರಾಮದಲ್ಲಿರುವ ಹಳ್ಳಿಕೇಶ್ವರ ದೇವಸ್ಥಾನದಲ್ಲಿ ಪೂಜಾರಿ ವಿವಾದ ಎರಡು ಗುಂಪುಗಳಾಗಿ ಮಾರ್ಪಟ್ಟು ಪೊಲೀಸ್ ಠಾಣೆ ಮೆಟ್ಟಿಲೇರಿರುವುದೂ ಅಲ್ಲದೆ ದೇವಾಲಯದ ಬಾಗಿಲಿಗೆ ಬೀಗಗಳನ್ನು ಜಡಿದಿರುವಂತಹ ವಿಲಕ್ಷಣ ಪ್ರಸಂಗ ನಡೆದಿದೆ.

ಗ್ರಾಮದಲ್ಲಿರುವ ಹಳ್ಳಿಕೇಶ್ವರ, ವಿನಾಯಕ ಹಾಗೂ ಬೋರೇಶ್ವರ ವಿಗ್ರಹಗಳಿರುವ ದೇವಾಲಯವನ್ನು ಕಳೆದ ಎಂಟತ್ತು ವರ್ಷಗಳ ಹಿಂದೆ ಜೀರ್ಣೋದ್ದಾರ ಮಾಡಲಾಗಿತ್ತು. ಇದರ ನಿರ್ವಹಣೆಗೆ ಟ್ರಸ್ಟ್‌ವೊಂದನ್ನು ಸಹ ರಚಿಸಲಾಯಿತು. ರಾಜ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಎಂ. ಲಿಂಗಯ್ಯ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು.

ಸಾರ್ವಜನಿಕರಿಂದ ವಂತಿಕೆ ಸ್ವೀಕರಿಸಿ ದೇವಸ್ಥಾನದ ಅಂದವನ್ನು ಹೆಚ್ಚಿಸಿದ್ದ ಎಂ. ಲಿಂಗಯ್ಯ ನೇತೃತ್ವದ ಟ್ರಸ್ಟ್, ನಿತ್ಯ ದೇವಾಲಯದಲ್ಲಿ ಪೂಜೆ ನಡೆಯುವಂತಾಗಲು ಸಕಲ ವ್ಯವಸ್ಥೆಯನ್ನೂ ಮಾಡಿತ್ತು. ಜೀರ್ಣೋದ್ದಾರಕ್ಕೂ ಮುನ್ನ ಇದೇ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಪೂಜಾರಿ ನಿತ್ಯ ಪೂಜೆ ಮಾಡಲು ಸಾಧ್ಯವಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಕ್ಯಾತೆ ತೆಗೆದಿದ್ದರು.

ಇದರಿಂದ ಅಸಮಾಧಾನಗೊಂಡ ಟ್ರಸ್ಟ್, ಹಳೇ ಪೂಜಾರಿಯನ್ನು ಕಿತ್ತುಹಾಕಿ ಹೊಸ ಪೂಜಾರಿಯನ್ನು ನೇಮಕ ಮಾಡಿತ್ತು. ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತಿತ್ತು. ಇತ್ತೀಚೆಗೆ ಮಂಡ್ಯದ ಕಾಳಿಕಾಂಬ ದೇವಸ್ಥಾನದ ಕೊಂಡ-ಬಂಡಿ ಉತ್ಸವಕ್ಕೆ ಸಂಬಂಧಿಸಿದಂತೆ ಹಳ್ಳಿಕೇಶ್ವರ ದೇವಸ್ಥಾನದಿಂದ ಕತ್ತಿಯೊಂದನ್ನು ಕಾಳಿಕಾಂಬ ದೇವಸ್ಥಾನಕ್ಕೆ ತಂದು ಕೊಂಡದ ಬಳಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಕಳೆದ ವರ್ಷ ಹೊಸ ಪೂಜಾರಿಯಿಂದ ಮಾಡಲಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಕಾಳಿಕಾಂಬ ದೇವಸ್ಥಾನದ ಮುಖ್ಯಸ್ಥರು ಹಾಗೂ ಹಳ್ಳಿಕೇಶ್ವರ ದೇವಸ್ಥಾನದ ಕೆಲವರು ಹಳೆ ಪೂಜಾರಿಯನ್ನು ಕರೆಸಿ ಕತ್ತಿಯನ್ನು ಹಳ್ಳಿಕೇಶ್ವರ ದೇವಸ್ಥಾನದಿಂದ ತರುವಂತೆ ಮನವಿ ಮಾಡಿದ್ದರಿಂದ ಹಳೇ ಪೂಜಾರಿಯೇ ದೇವಸ್ಥಾನದಿಂದ ಕತ್ತಿ ತೆಗೆದುಕೊಂಡು ಬಂದಿದ್ದ. ಇದಕ್ಕೂ ಮುನ್ನ ದೇವಾಲಯದಲ್ಲಿರುವ ಮೂಲ ವಿಗ್ರಹಕ್ಕೆ ಲಿಂಗಧಾರಣೆ ಮಾಡುವುದು ಪದ್ಧತಿ. ಅದರಂತೆ ಪೂಜಾರಿ ಮೂಲ ವಿಗ್ರಹಕ್ಕೆ ಲಿಂಗಧಾರಣೆ ಮಾಡಿದ ನಂತರ ಕತ್ತಿ ತೆಗೆದುಕೊಂಡು ಬಂದು ಕಾಳಿಕಾಂಬ ದೇವಸ್ಥಾನದ ಕೊಂಡ ಬಂಡಿ ಉತ್ಸವ ನಡೆದಿತ್ತು.

ನಂತರ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಿದ್ದ. ಟ್ರಸ್ಟ್‌ನ ಸದಸ್ಯರು ಇದನ್ನು ಕಂಡು ಆತನ ಮೇಲೆ ತೀವ್ರ ವಾಗ್ದಾಳಿ ನಡೆಸಿದರಲ್ಲದೆ, ಆತನ ಮೇಲೆ ಹಲ್ಲೆಯನ್ನೂ ಮಾಡಿದರು. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಯಿತು. ಒಂದು ಗುಂಪು ಹಳೇ ಪೂಜಾರಿಯನ್ನೇ ಮುಂದುವರಿಸುವಂತೆ ಪಟ್ಟು ಹಿಡಿದರೆ, ಮತ್ತೆ ಕೆಲವರು ಹೊಸ ಪೂಜಾರಿಯಿಂದ ಪೂಜೆ ಮಾಡಿಸಬೇಕೆಂದು ವಾದ ಮಂಡಿಸಿದ್ದರು. ಎರಡೂ ಗುಂಪುಗಳು ದೇವಸ್ಥಾನದಲ್ಲಿ ಪೂಜೆ ಮಾಡುವುದೇ ಬೇಡ ಎಂದು ಪ್ರತ್ಯೇಕ ಬೀಗಗಳನ್ನು ಬಾಗಿಲಿಗೆ ಜಡಿದೇಬಿಟ್ಟರು.

ಪೊಲೀಸರಿಗೆ ಸುದ್ದಿ ಮುಟ್ಟಿತು. ಡಿವೈಎಸ್ಪಿ ದಿನೇಶ್ ಅವರು ಎರಡೂ ಕಡೆಯ ಮುಖಂಡರನ್ನು ಕರೆಸಿ ರಾಜೀ ಸಂಧಾನ ಮಾಡಲು ಯತ್ನಿಸಿದರಾದರೂ, ಟ್ರಸ್ಟ್ ಅಧ್ಯಕ್ಷ ಎಂ.ಲಿಂಗಯ್ಯ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಪ್ರತಿ ಭಾನುವಾರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಪೂಜೆ ನಡೆಯುತ್ತಿತ್ತು. ಗ್ರಾಮಸ್ಥರು ದೇವಸ್ಥಾನದ ಹೊರಗೆ ನಿಂತು ಟ್ರಸ್ಟ್ ಹಾಗೂ ಮತ್ತೊಂದು ಗುಂಪಿಗೆ ಹಿಡಿಶಾಪ ಹಾಕುತ್ತಾ ಪೂಜೆ ಮಾಡುತ್ತಿದ್ದಾರೆ.

ಇದೇ ದೇವಸ್ಥಾನದ ಮತ್ತೊಂದು ಬದಿಯಲ್ಲಿರುವ ಬೋರೇಶ್ವರ ದೇವರ ಒಕ್ಕಲಿನವರು ಯಾವುದೇ ವಿವಾದ ಉಂಟುಮಾಡದೆ, ದೇವಸ್ಥಾನದ ಬಾಗಿಲನ್ನು ತೆಗೆಸಿ ಎಂದು ಪಟ್ಟು ಹಿಡಿದಿದ್ದಾರೆ. ಬೀಗ ತೆಗೆಸಿ ಬೋರೇಶ್ವರ, ಹಳ್ಳಿಕೇಶ್ವರ ಎಂದು ವಿಂಗಡಿಸಿ ಮಧ್ಯದಲ್ಲಿ ಗೋಡೆ ನಿರ್ಮಿಸಿ ಬೋರೇಶ್ವರನಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಇದೀಗ ವಿವಾದದಲ್ಲೇ ಮುಳುಗಿರುವ ಹಳ್ಳಿಕೇಶ್ವರ ಹಾಗೂ ಬೋರೇಶ್ವರನಿಗೆ ನಿತ್ಯಪೂಜೆ ಇಲ್ಲದೆ ಬಣಗುಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಾಲಯಕ್ಕೆ ಬೀಗ ಹಾಕಿರುವುದರಿಂದ ಭಕ್ತಾದಿಗಳು ಹೊರಗಡೆಯಿಂದಲೇ ಪೂಜೆ ಸಲ್ಲಿಸುತ್ತಿದ್ದಾರೆ.

ನೀವೂ ನಾಗರಿಕ ಪತ್ರಕರ್ತರಾಗಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+